ಸರಕಾರವೇ ಸಾರಿತ್ತು ಕೊಳವೆ ಬಾವಿ ನೀರು ಸುರಕ್ಷಿತ!: ಜನ ಸರಕಾರವೇ ಪ್ರಚಾರ ಮಾಡಿದ ಈ ಮಾತನ್ನು ತೀರ ನಂಬಿದರು. ಮನೆಗೊಂದು ಬೋರ್ ವೆಲ್ ಅನಿವಾರ್ಯ ವೆಂಬಂತೆ ಎಲ್ಲರೂ ಅಂತರ್ಜಲದ ಮೇಲೆ ಮಾಲ್ಕಿ ಹಕ್ಕು ತೋರಿಸಲು ಮುಂದಾದರು. ನಿಜಕ್ಕೂ ತೆರೆದ ಬಾವಿಯಷ್ಟು ಶುದ್ಧವಾದದ್ದು ಬೇರೆ ಯಾವುದೂ ಅಲ್ಲ! ಮೊದಲಿಗೆ ೧೦೦ ರಿಂದ ೧೫೦ ಅಡಿಗಳಿಗೆ ನೀರು ನಿಲುಕುತ್ತಿತ್ತು. ಈಗ ಕನಿಷ್ಠ ೬೦೦ ಅಡಿಗಳು ಗರಿಷ್ಠ ೧೫೦೦ ಅಡಿಗಳ ವರೆಗೆ ಕೃಷಿಗಾಗಿ ಬೋರ್ ವೆಲ್ ಕೊರೆಯಲಾಗುತ್ತಿದೆ. ಹಾಗಾಗಿ ಭೂಮಿಯ ಮೇಲ್ಪದರಿಗಿಂತ ಒಳ ಪದರುಗಳಲ್ಲಿ ಲವಣಾಂಶ, ಆರ್ಸೆನಿಕ್ ಹಾಗೂ ಫ್ಲೋರೈಡ್ ಅತ್ಯಂತ ಏಕಾಗ್ರಿತವಾಗಿ ದೊರಕುವುದರಿಂದ ಅದರ ಆ ನೀರಿನ ಬಳಕೆ ಅಪಾಯಕಾರಿಯಾದದ್ದು. ನೇರವಾಗಿ ಕುಡಿಯಲು ಮಾತ್ರವಲ್ಲದೇ ಕೃಷಿಗೂ ಆ ನೀರು ಬಳಕೆಯಾಗುತ್ತಿರುವುದರಿಂದ ನಾವು ಉಣ್ಣುವ ಅನ್ನದ ಬಟ್ಟಲನ್ನೂ ವಿಷವಾಗಿಸುತ್ತಿದೆ.
ಹೆಚ್ಚಾಗಿ ಬೇಸಿಗೆಯಲ್ಲಿ ಅಂತರ್ಜಲದಲ್ಲಿ ಈ ಲವಣಾಂಶಗಳ ಸೇರಿಕೆ ಅಪಾರ ಪ್ರಮಾಣದಲ್ಲಿದ್ದು, ನೀರಿನ ಬೇಡಿಕೆಯೂ ಅಷ್ಟೇ ಹೆಚ್ಚಿರುವುದರಿಂದ ೩೦೦ ಅಡಿಗಳಿಗಿಂತ ಕೆಳಗೆ ಕೊರೆಯಲಾದ ಬೋರ್ ವೆಲ್ ನೀರು ಬೇಸಿಗೆಯಲ್ಲಿ ಬಳಕೆಗೆ ಸೂಕ್ತವಲ್ಲ ಎನ್ನುತ್ತದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್, ನವ ದೆಹಲಿಯಲ್ಲಿ ಈ ಕುರಿತು ವ್ಯಾಪಕ ಅಧ್ಯಯನ ಕೈಗೊಳ್ಳಲು ಸಹಾಯಕವಾಗುವಂತೆ ಒಂದು ಸಂಶೋಧನಾ ಕೇಂದ್ರವನ್ನೇ ತೆರೆಯಲಾಗಿದೆ.
ಅಮೇರಿಕೆಯ ಭೂಗರ್ಭದಲ್ಲಿ 'ಫ್ಲೋರೈಡ್' ಅಂಶವೇ ಇಲ್ಲ. ಹಾಗಾಗಿ ಅಲ್ಲಿನ ಜನ ಕುಡಿಯುವ ನೀರಿನಲ್ಲಿ ಆರ್ಸೆನಿಕ, ಫ್ಲೋರೈಡ್ ನಂತಹ ಆಘಾತಕಾರಿ ಲವಣಗಳು ಸೇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೇರಿಕೆಯವರು 'ಫ್ಲೋರೈಡ್ ಯುಕ್ತ' ದೇಹಕ್ಕೆ ಬೇಕಾದ ಪರಿಮಿತ ಪ್ರಮಾಣದ ಫ್ಲೋರೈಡ್ ಟೂಥ್ ಪೇಸ್ಟ್ ತಯಾಸಿದರು. ಅದು ಭಾರತದ ಮಾರುಕಟ್ಟೆಗೂ ಲಗ್ಗೆ ಇಟ್ಟಿತು. ಚಿಕ್ಕ ಮಕ್ಕಳಲ್ಲಿ ಹಲ್ಲುಗಳು ಮುರುಟುವ ಸಮಸ್ಯೆ ಕಂಡುಬಂತು.
ಚೈನಾ ಒಂದೇ ದೇಶ ಇಡೀ ಜಗತ್ತಿನಲ್ಲಿ ತನ್ನ ಕುಡಿಯುವ ನೀರಿನ ಮೂಲಗಳನ್ನು ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಂಡು ಬಂದಿದೆ. ಅಲ್ಲಿನ ಪ್ರಶಾಸನಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆ, ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ದೂರದೃಷ್ಟಿ ಇದೆ. ನದಿ ಇರಲಿ, ಝರಿ ಇರಲಿ, ತೊರೆ, ಕೆರೆ ಅಥವಾ ಹಳ್ಳಗಳಿರಲಿ..ಅವುಗಳ 'ಕ್ಯಾಚಮೆಂಟ್ ಏರಿಯಾ' ದಲ್ಲಿ ಕಟ್ಟಡ ಕಟ್ಟುವುದು, ಮಲೀನ ಸುರಿಯುದು ಅಥವಾ ಸೇರಿಸುವುದು, ಅಂತರ್ಜಲ ನವೀಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಸ್ಪಷ್ಠ ಚಿತ್ರಣ, ಹಾಗೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವಿಕೆ ಅವರನ್ನು ಜಲಜನ್ಯ ಹಾಗೂ ಸಾಂಕ್ರಾಮಿಕ ರೋಗಗಳಿಂದ ಕಾಯ್ದಿದೆ.
ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೇಗೆ ನಾವು ಉಸಿರಾಡುವ ಗಾಳಿಗೆ 'ಮೀಟರ್' ಅಳವಡಿಕೆಯಾಗಿಲ್ಲವೋ? ಅದು ಇಂದಿಗೂ ಉಚಿತವಾಗಿ ಎಲ್ಲರಿಗೂ ಲಭ್ಯವಿದೆಯೋ? ಹಾಗೇ, ನೀರೂ ಕೂಡ ನಮ್ಮ ಹಕ್ಕು, ನಾವು ಅದಕ್ಕೆ ಹಣ ನೀಡಬೇಕಾದ ಅವಶ್ಯಕತೆ ಇಲ್ಲ. ಅದು ತೊರೆಯಾಗಿ, ಝರಿಯಾಗಿ, ಹಳ್ಳವಾಗಿ, ಕೆರೆಯಾಗಿ, ನದಿಯಾಗಿ ಇನ್ನು ಅನೇಕ ರೀತಿ ಹರಿಯುವಲ್ಲಿ ಯಾರ ಅಪ್ಪಣೆಯೂ ಬೇಕಿಲ್ಲ. ಅದು ನಿಸರ್ಗದತ್ತವಾಗಿ, ಉಚಿತವಾಗಿ ನಮಗೆ ದೊರಕಬೇಕು.
ತಂತ್ರಜ್ಞಾನ ಎಷ್ಟೇ ಬದಲಾದರೂ, ಹೊಸ ಹೊಸ ಅನ್ವೇಷಣೆಗಳು ಎಷ್ಟೇ ಮಾರುಕಟ್ಟೆ ಹೊಕ್ಕರೂ, ನೀರಿನ ಪ್ರತಿ ನಮ್ಮ ಧೋರಣೆ, ನಮಗಿರುವ ಮನಸ್ಥಿತಿ ಬದಲಾಗದ ಹೊರತು ಸದ್ಯದ ಸ್ಥಿತಿ ವ್ಯತ್ಯಾಸವಾಗಲಾರದು.