ಶನಿವಾರ, ಆಗಸ್ಟ್ 7, 2010

‘ಹಸಿರು ತುಮಕೂರು’

ಏನಿದು ‘ಹಸಿರು ತುಮಕೂರು’?:
ನಗರದಾದ್ಯಂತ ಈಗಾಗಲೇ ಬೆಳವಣಿಗೆ ಕಂಡಿರುವ ವಿವಿಧ ಬಡಾವಣೆಗಳ ರಸ್ತೆ ಬದಿಯಲ್ಲಿ, ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ಲೇಔಟ್ಗಳಲ್ಲಿ, ಕೈಗಾರಿಕಾ ಪ್ರದೇಶದಲ್ಲಿ, ಖಾಲಿ ಇರುವ ಸರ್ಕಾರಿ ಮತ್ತು ಖಾಸಗಿ ಸ್ಥಳದಲ್ಲಿ ವೃಕ್ಷ ಪ್ರಾಧಿಕಾರ ಗೊತ್ತುಪಡಿಸಿದ ನಿಯಮಾನುಸಾರ ವೈಜ್ಞಾನಿಕವಾಗಿ ಗಿಡ ಮರಗಳನ್ನು ನೆಟ್ಟು ಪೋಷಿಸುವುದು, ಆ ಮೂಲಕ ನಗರದ ತುಂಬೆಲ್ಲಾ ಹಸಿರಿನ ವಾತಾವರಣ ನಿರ್ಮಿಸುವುದೇ ‘ಹಸಿರು ತುಮಕೂರು’ ಯೋಜನೆ.

ವೃಕ್ಷ ಪ್ರಾಧಿಕಾರ:
ಕರ್ನಾಟಕ ಅರಣ್ಯ ಸಂರಕ್ಷಣೆ ಕಾಯಿದೆ 1976ರ ಪ್ರಕಾರ ಪ್ರತಿಯೊಂದು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ವೃಕ್ಷ ಪ್ರಾಧಿಕಾರ ರಚಿಸಲು ಸರ್ಕಾರ ತೀರ್ಮಾನಿಸಿದೆ. ಆ ಪ್ರಕಾರ, ನಗರವೊಂದರಲ್ಲಿ ರಚನೆಗೊಳ್ಳುವ ಪ್ರಾಧಿಕಾರದಲ್ಲಿ ನಗರಸಭೆ ಅಧ್ಯಕ್ಷ, ಆಯುಕ್ತ, ಉಪ ಅರಣ್ಯ ಸಂರಕ್ಷಣಾಧಿಕಾರಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ಹಾಗೂ ಓರ್ವ ನಗರಸಭೆ ಸದಸ್ಯರೂ ಸೇರಿದಂತೆ ಒಟ್ಟು 5 ಜನ ಸದಸ್ಯರಿರುವುದು ಕಡ್ಡಾಯ.

ಪ್ರಾಧಿಕಾರದ ಕರ್ತವ್ಯ:
ನಗರ ಮಿತಿಯಲ್ಲಿ ಹಾಲಿ ಎಷ್ಟು ಮರಗಳಿವೆ ಎಂಬುದರ ಬಗ್ಗೆ ಕಾಲ ಕಾಲಕ್ಕೆ ಸಮೀಕ್ಷೆ ಕೈಗೊಳ್ಳುವುದು, ಬಡಾವಣೆಗಳ ರಸ್ತೆ ಬದಿ, ಖಾಸಗಿ, ಸರ್ಕಾರಿ ಭೂಮಿಯಲ್ಲಿ ಸ್ಥಳ ಗುರುತಿಸುವುದು, ಗಿಡ ನೆಟ್ಟು ಪೋಷಿಸುವುದು, ಸಸಿಸತ್ತು ಹೋದರೆ ಆ ಸ್ಥಳದಲ್ಲಿ ಹೊಸದಾಗಿ ಗಿಡನೆಡುವುದು, ರಸ್ತೆ ಅಭಿವೃದ್ಧಿ, ವಿಸ್ತರಣೆ ವೇಳೆ ಆ ರಸ್ತೆಗಳ ಗುಣಮಟ್ಟ ಆಧರಿಸಿ ಗಿಡ ನೆಡಲು ಕ್ರಮ ಕೈಗೊಳ್ಳುವುದೂ ಸೇರಿದಂತೆ ಅಗತ್ಯ ಪ್ರಮಾಣದಲ್ಲಿ ಬೀಜ ಅಥವಾ ಸಸಿಗಳನ್ನು ಪೂರೈಸುವುದು ವೃಕ್ಷ ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದೆ.

ಹಸಿರು ಸಂರಕ್ಷಣಾ ಪಡೆ:
ಆದರೆ ತುಮಕೂರು ನಗರಸಭೆ ಆಡಳಿತ ವೃಕ್ಷ ಪ್ರಾಧಿಕಾರ ರಚಿಸುವ ಬದಲು ಇದಕ್ಕೆ ಪರ್ಯಾಯವಾಗಿ ಹಸಿರು ಸಂರಕ್ಷಣಾ ಪಡೆ ರಚಿಸಿದೆ. ನಗರ ಮಿತಿಯಲ್ಲಿ ಕಳೆದೊಂದು ವರ್ಷದಿಂದ ವಿವಿಧೆಡೆ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ, ಉದ್ದೇಶಿತ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ರಸ್ತೆ ಇಕ್ಕೆಲಗಳಲ್ಲಿನ ಮರಗಳನ್ನು ಹಸಿರು ಸಂರಕ್ಷಣಾ ಪಡೆ ನೀಡಿದ ಅರೆಬರೆ ಒಪ್ಪಿಗೆ ಮೇರೆಗೆ ತೆರವು ಗೊಳಿಸಿದೆ. ಹೀಗೆ ತೆರವುಗೊಳಿಸಿದ ಮರಗಳ ಸಂಖ್ಯೆ 400ಕ್ಕೂ ಅಧಿಕವಾಗಿದೆ.

ರಸ್ತೆ ಬದಿಯ ಮರಗಳನ್ನು ಯಾವುದೇ ಇಲಾಖೆ ತೆರವುಗೊಳಿಸಬೇಕಿದ್ದರೆ, ಅದಕ್ಕೆ ಪ್ರತಿಯಾಗಿ ಒಂದು ಮರಕ್ಕೆ ಹತ್ತು ಸಸಿಗಳನ್ನು ನೆಟ್ಟು 5 ವರ್ಷ ಪೋಷಿಸಲು ಪ್ರತಿ ಗಿಡಕ್ಕೆ ರೂ. 715ರಂತೆ ತಗಲುವ ನಿರ್ವಹಣಾ ವೆಚ್ಚವನ್ನು ಅರಣ್ಯ ಇಲಾಖೆಗೆ ಪಾವತಿಸಬೇಕೆಂಬ ನಿಯಮವಿದೆ. ಅದರಂತೆ ನಗರ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾರ್ಯಕ್ಕೆ ಅಡ್ಡಿಯಾಗಿದ್ದ 400ಕ್ಕೂ ಹೆಚ್ಚು ಮರತೆರವುಗೊಳಿಸಿರುವ ನಗರಸಭೆ ಇದಕ್ಕೆ ಪ್ರತಿಯಾಗಿ ಸಸಿ ನೆಟ್ಟು ಪೋಷಿಸಲು ರೂ. 14 ಲಕ್ಷವನ್ನು ಅರಣ್ಯ ಇಲಾಖೆಗೆ ಪಾವತಿಸಿದೆ.

ಅರಣ್ಯ ಇಲಾಖೆ ಸಹ ಪ್ರಸಕ್ತ ಸಾಲಿನಲ್ಲಿ ನಗರ ವ್ಯಾಪ್ತಿಯಲ್ಲಿ ಬರುವ 31 ವಿವಿಧ ಪಾರ್ಕುಗಳ ಒಟ್ಟು 29 ಹೆಕ್ಟೇರ್ ಪ್ರದೇಶದಲ್ಲಿ 5729 ಗಿಡನೆಡಲು ಉದ್ದೇಶಿಸಿದೆ. ಇದಕ್ಕಾಗಿ ರೂ. 26.96 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಾಗಿದ್ದು, ಯೋಜನೆಗೆ ಅಗತ್ಯವಿರುವ ಸಸಿಗಳನ್ನು ನಗರದ ಹೊರವಲಯದ ಸಿದ್ಧಾರ್ಥ ನಗರದಲ್ಲಿರುವ ಸಸ್ಯ ಕ್ಷೇತ್ರದಲ್ಲಿ ಹುಲುಸಾಗಿ ಬೆಳೆಸಿದೆ.
ನಗರ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಗುರುತರ ಜವಾಬ್ದಾರಿ ಹೊತ್ತ ಅರಣ್ಯ ಇಲಾಖೆ, ನಗರಸಭೆ ಆಡಳಿತ ಪರಸ್ಪರರ ನಡುವೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸುವ ಮೂಲಕ ಉದ್ದೇಶಿತ ಹಸಿರು ತುಮಕೂರು ಯೋಜನೆಯನ್ನು ಅಸ್ತಿತ್ವಕ್ಕೆ ತರುವರೇ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.

ಕಾಮೆಂಟ್‌ಗಳಿಲ್ಲ: