ಭಾನುವಾರ, ಆಗಸ್ಟ್ 22, 2010

ಹೆಚ್ಚು ನೀರು ಕುಡಿಯಿರಿ, ಆರೋಗ್ಯವಾಗಿರಿ

ನುಷ್ಯನ ದೇಹದಲ್ಲಿರುವ ನೀರಿನಾಂಶ ಎಷ್ಟು?

ಶೇಕಡಾ ೬೦.೭ ಎನ್ನುತ್ತಾರೆ ತಜ್ಞರು. ಅಂದರೆ, ಮನುಷ್ಯನ ದೇಹದ ತೂಕ ನೂರು ಕೆಜಿ ಇದೆ ಎಂದರೆ, ೬೦.೭ ಕೆಜಿ ನೀರಿರುತ್ತದೆ. ಇದರರ್ಥ: ನೀರು ಮನುಷ್ಯನ ಅತ್ಯಂತ ಮೂಲಭೂತ ಅವಶ್ಯಕತೆ.
ಹೀಗಿದ್ದರೂ, ನೀರೆಂದರೆ ನಮಗೆ ನಿರ್ಲಕ್ಷ್ಯ. ಅಲರ್ಜಿ. ಆರೋಗ್ಯ ಕೆಟ್ಟಿದೆ ಎಂದರೆ, ನಾವು ನೀರು ಕುಡಿಯಲು ಹಿಂಜರಿಯುತ್ತೇವೆ. ನೀರಿನ ಬದಲು ಚಹ, ಕಾಫಿ, ಹಾಲು, ತಂಪುಪಾನೀಯ, ಹಣ್ಣಿನ ರಸ ಸೇವಿಸುತ್ತೇವೆಯೇ ಹೊರತು ನೀರು ಕುಡಿಯಲು ಮುಂದಾಗುವುದಿಲ್ಲ.
ದೊಡ್ಡವರನ್ನು ಬಿಡಿ, ಮಕ್ಕಳ ಆರೋಗ್ಯ ಕೆಟ್ಟಾಗಲೂ ನಾವು ನೀರು ಕುಡಿಸಲು ಹಿಂಜರಿಯುತ್ತೇವೆ. ಮಕ್ಕಳು ಆರೋಗ್ಯವಾಗಿದ್ದಾಗ ಕೂಡ ನೀರಿನಿಂದ ಮಕ್ಕಳನ್ನು ದೂರ ಇಡುವುದರತ್ತಲೇ ನಮ್ಮ ಗಮನ. ಊಟ ಮಾಡುವಾಗಲಂತೂ ಮಕ್ಕಳಿಗೆ ನೀರನ್ನೇ ಕುಡಿಸುವುದಿಲ್ಲ. ಹೆಚ್ಚು ನೀರು ಕುಡಿದರೆ ಊಟ ಮಾಡುವುದಿಲ್ಲ ಎಂಬ ಅಳುಕು.
ತಮಾಷೆ ಎನ್ನಿ, ಸತ್ಯ ಸಂಗತಿ ಎನ್ನಿ, ನೀರೇ ಬದುಕಿನ ಜೀವಾಳ. ಹೆಚ್ಚು ನೀರು ಕುಡಿದರೆ ದೇಹಕ್ಕೆ ಒಳ್ಳೆಯದೇ. ನಮ್ಮ ಬಹುತೇಕ ದೈಹಿಕ ಸಮಸ್ಯೆಗಳಿಗೆ ನೀರೇ ಮದ್ದು. ಆದರೆ, ಕುಡಿಯುವ ನೀರು ಶುದ್ಧವಾಗಿರಬೇಕಷ್ಟೇ.
ಮ್ಮ ದೇಹ ನೀರನ್ನು ಬಳಸಿಕೊಳ್ಳುವ ಕ್ರಿಯೆಯೇ ಅದ್ಭುತ. ನೀರು ತೊಳೆಯಲು, ರೋಗಾಣುಗಳನ್ನು ದೂರವಿಡಲು, ದೇಹದ ಕಶ್ಮಲಗಳನ್ನು ಹೊರಹಾಕಲು ನೆರವಾಗುತ್ತದೆ. ಆಹಾರ ಜೀರ್ಣಗೊಳ್ಳಲು, ರಕ್ತವಾಗಲು, ದೇಹದ ಜೈವಿಕ ಕ್ರಿಯೆ ಸುಲಲಿತವಾಗಿ ನಡೆಯಲು ನೀರೇ ಉತ್ತಮ ಕ್ಯಾರಿಯರ್‍.
ಕಣ್ಣಲ್ಲಿ ದೂಳು ಬಿತ್ತೆಂದರೆ, ತಕ್ಷಣ ನೀರು ಸುರಿಯುತ್ತದೆ. ಆ ಮೂಲಕ ದೂಳನ್ನು ಹೊರಹಾಕುತ್ತದೆ. ಸೊಗಸಾದ ಆಹಾರದ ಸುವಾಸನೆ ಬರುತ್ತಿದ್ದಂತೆ, ಬಾಯಲ್ಲಿ ನೀರೂರುತ್ತದೆ. ಆ ಮೂಲಕ, ಆಹಾರದ ಪಚನಕ್ರಿಯೆಗೆ ನೆರವಾಗುತ್ತದೆ. ಮೂಗಿನಲ್ಲಿ ಪರವಸ್ತುಗಳ ಪ್ರವೇಶವಾದರೆ ಅದು ಒಳಗೆ ಹೋಗದಂತೆ ನೀರಿನ ಇನ್ನೊಂದು ರೂಪವಾದ ಸಿಂಬಳ ತಡೆಯುತ್ತದೆ. ಇನ್ನು ದೇಹದ ಬಹುತೇಕ ದ್ರವ ಕಶ್ಮಲಗಳು ಹೊರಬರುವುದು ಮೂತ್ರದ ಮೂಲಕ.
ಒಂದು ವೇಳೆ ಹೊಟ್ಟೆಯಲ್ಲಿ ವಿಷಕಾರಿ ವಸ್ತುಗಳು ಅಥವಾ ಅಪಾಯಕಾರಿ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಾಯಿತೆನ್ನಿ. ಆಗ, ಭೇದಿ ಹತ್ತಿಕೊಳ್ಳುತ್ತದೆ. ಆ ಮೂಲಕ, ಅಪಾಯಕಾರಿ ವಸ್ತುಗಳು, ಜೀವಾಣುಗಳು ಸರಾಗವಾಗಿ ಹೊರಹೋಗುತ್ತವೆ. ದೇಹದ ಉಷ್ಣಾಂಶವನ್ನು ಬೆವರು ಸುರಿಸುವ ಮೂಲಕ ನಿಯಂತ್ರಿಸುವುದೂ ಇದೇ ರೀತಿ. ಬೆವರು ಹೊರಬಂದಷ್ಟೂ ದೇಹ ತಂಪಾಗುತ್ತದೆ. ಇದೊಂಥರಾ ನೈಸರ್ಗಿಕ ವಾತಾನುಕೂಲಿತ ವ್ಯವಸ್ಥೆ.
ನಾವು ನಿತ್ಯ ಕುಡಿಯುವ ನೀರಿನ ಮುಕ್ಕಾಲು ಭಾಗ ಪ್ರತಿದಿನ ದೇಹದಿಂದ ಹೊರಹೋಗುತ್ತದೆ. ಉಸಿರಾಟ, ಬೆವರುವಿಕೆ, ಮೂತ್ರ ವಿರ್ಸಜನೆ ಮೂಲಕ ಬಹುಪಾಲು ನೀರು ಹೊರಬೀಳುತ್ತದೆ. ಉಳಿದ ನೀರು ಜೀರ್ಣ ಪ್ರಕ್ರಿಯೆ ಮೂಲಕ ದೇಹ ಸೇರುತ್ತದೆ. ರಕ್ತ, ಜೀವಕಣಗಳ ಉತ್ಪಾದನೆಯಲ್ಲಿ ವ್ಯಯವಾಗುವ ನೀರು ದೇಹದ ಪ್ರಮುಖ ಅವಶ್ಯಕತೆ.
ಹೀಗೆ ಹೊರಹೋಗುವ ಮುಕ್ಕಾಲುಪಾಲು ನೀರು ಮತ್ತೆ ದೇಹ ಸೇರಲೇಬೇಕು.
ಅದಕ್ಕಾಗಿ ನೀರಿನಂಶ ಹೆಚ್ಚಾಗಿರುವ ಹಣ್ಣಿನರಸ, ಎಳನೀರು ಮುಂತಾದವನ್ನು ಸೇವಿಸಬೇಕು. ನಾವು ತಿನ್ನುವ ಹಣ್ಣು-ಹಂಪಲು, ತರಕಾರಿ, ಆಹಾರದಲ್ಲಿ ನೀರಿದೆ. ಇದರ ಹೊರತಾಗಿ, ದಿನಕ್ಕೆ ಕನಿಷ್ಠ ಎರಡು ಲೀಟರ್‌ ನೀರನ್ನಾದರೂ ಕುಡಿಯಬೇಕು. ವ್ಯಾಯಾಮ ಮಾಡುವವರು, ಬಿಸಿಲಲ್ಲಿ ದುಡಿಯುವವರು, ಹೆಚ್ಚು ಓಡಾಡುವವರು ಇದಕ್ಕಿಂತ ಹೆಚ್ಚು ನೀರು ಕುಡಿಯುವುದು ಉತ್ತಮ.
ನಾವೆಲ್ಲ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ದೇಹವನ್ನು ಸೇರುವ ನೀರು ಶುದ್ಧವಾಗಿರಬೇಕು. ಅಂದರೆ, ರೋಗಾಣುಗಳಿಂದ, ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರಬೇಕು. ಇಲ್ಲದಿದ್ದರೆ, ಆರೋಗ್ಯದ ಮುಖ್ಯ ಅಂಗವಾಗಿರುವ ನೀರೇ ಅನಾರೋಗ್ಯಕ್ಕೂ ಕಾರಣವಾಗಬಲ್ಲುದು.
ನಮ್ಮ ದೇಶದಲ್ಲಿ ಪ್ರತಿ ವರ್ಷ ಒಂದು ಕೋಟಿ ಮಕ್ಕಳು ಭೇದಿಯಿಂದ ಬಳಲುತ್ತಾರೆ. ಆ ಪೈಕಿ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಸತ್ತುಹೋಗುತ್ತಾರೆ. ಒಂದು ವರ್ಷದಲ್ಲಿ ಕನಿಷ್ಠ ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಕಾಲರಾ ಪೀಡಿತರಾಗುತ್ತಾರೆ. ವಿಷಮಶೀತ ಜ್ವರ, ಕಾಮಾಲೆ, ಆಮಶಂಕೆ, ಜಂತುಹುಳು, ಪೋಲಿಯೊ ಮುಂತಾದ ಅನೇಕ ರೋಗಗಳ ಮೂಲ ಕಲುಷಿತ ನೀರೇ.

ಕಾಮೆಂಟ್‌ಗಳಿಲ್ಲ: