ಭಾನುವಾರ, ಆಗಸ್ಟ್ 29, 2010

ಕೃಷಿ ಹೊಂಡಗಳ ಗ್ರಾಮ “ರುದ್ರವಾಡಿ”

ಆಳಂದ ಸಮೀಪದ ರುದ್ರವಾಡಿಯ ಆದಿನಾಥ್ ಹೀರಾ ಅವರು ನಾಡಿನ ಎಲ್ಲ ಮೇಧಾವಿ ರೈತರ ಪ್ರತಿನಿದಿ. ಹೀರಾ ಅವರ ಪುಟ್ಟ ಊರಲ್ಲಿ ನಿಜಕ್ಕೂ ನಿತ್ಯೋತ್ಸವ. ಅಲ್ಲಿ ಬೀಳುವ ಪ್ರತಿ ಹನಿ ಮಳೆ ನೀರನ್ನೂ ಅವರು ಹಿಡಿದಿಟ್ಟುಕೊಳ್ಳುತ್ತಾರೆ. ಒಂದೇ ಒಂದು ಮಳೆ ಬಿದ್ದರೆ ಸಾಕು, ಅಲ್ಲಿನ ಮೂರು ಕೃಷಿ ಹೊಂಡಗಳು ಬರೋಬ್ಬರಿ ೧ ಕೋಟಿ ೫ ಸಾವಿರ ಲೀಟರ್ ನೀರನ್ನು ತಮ್ಮೊಡಲಲ್ಲಿ ತುಂಬಿಸಿಕೊಳ್ಳುತ್ತವೆ. ಆ ದಿನದಿಂದಲೇ ಅದು ಇಂಗಲು ಆರಂಭ. ವಾರೊಪ್ಪತ್ತಿನಲ್ಲಿ ಎಲ್ಲವೂ ನಿಧಾನಕ್ಕೆ ನೆಲದ ಕೆಳಕ್ಕೆ ಜಾರಿ ಅಂತರ್ಜಲವೆಂಬ ಸೇಫ್ ಲಾಕರ್‌ನಲ್ಲಿ ಭದ್ರವಾಗಿ ಬಿಡುತ್ತದೆ. ಹೆಚ್ಚುವರಿ ನೀರು ಮಾತ್ರ ಹೊಂಡದ ಮೇಲೆಯೇ ಅಲ್ಲಾಡಿ, ಅಲ್ಲಾಡಿ ತಿಳಿಗೊಂಡು ನಿಂತುಕೊಳ್ಳುತ್ತದೆ. ಮತ್ತೊಂದು ಮಳೆ ಬರುವವರೆಗೆ ಅದು ಬಳಕೆಗೆ ಸಂಪೂರ್ಣ ಉಚಿತ.

ರುದ್ರವಾಡಿಯೆಂದರೆ ಇಂದು ಕೃಷಿ ಹೊಂಡಗಳ ಗ್ರಾಮ. ಮಳೆ ನೀರು ಸಂಗ್ರಹಕ್ಕೆ ಮಾದರಿ ಅಲ್ಲಿನ ಕೃಷಿ, ನೀರಾವರಿ. ಅಷ್ಟೊಂದು ಸಮರ್ಥ ಉದಾಹರಣೆಯಾಗಿ ಗ್ರಾಮ ಬೆಳೆದು ನಿಂತದ್ದು ಹೀರಾರ ಕ್ರಿಯಾಶೀಲತೆ, ಇಚ್ಛಾಶಕ್ತಿ ಹಾಗೂ ನೀರ ಪ್ರೀತಿಯಿಂದಾಗಿ. ಇಂಥ ಗುಣಗಳೇ ಅವರಿಗೆ ೨೦೦೩ರಲ್ಲಿ ಕೃಷಿ ಪಂಡಿತ ಪ್ರಶಸ್ತಿಯನ್ನೂ ತಂದು ಕೊಟ್ಟಿವೆ. ಹಾಗೆಂದು ಅಂಥದ್ದೊಂದು ಪಾಂಡಿತ್ಯ ಆ ಪ್ರಗತಿಪರ ರೈತನಿಗೆ ಜನ್ಮದೊಂದಿಗೇ ಬಂದ ಬಳುವಳಿಯಲ್ಲ. ಯಾವುದೇ ವಿಶ್ವವಿದ್ಯಾಲಯದ ನಾಲ್ಕು ಗೋಡೆಗಳ ಮಧ್ಯೆ ಸಿಕ್ಕದ್ದೂ ಅಲ್ಲ. ಹೊಲವೆಂಬ ಪ್ರಯೋಗಶಾಲೆಯ ಮೂಸೆಯಲ್ಲಿ ನಿರಂತರ ಪರಿಶ್ರಮದಿಂದ ದಕ್ಕಿಸಿಕೊಂಡದ್ದು. ನೀರಿನ ಸಂಕಷ್ಟದಲ್ಲಿ ಬೆಂದ ಬಳಿಕ ನಶಿಸಿದ ಅಜ್ಞಾನದ ಕೊನೆಯಲ್ಲಿ ಗೋಚರಿಸಿದ್ದು. ಬರಡು ಭೂಮಿಯ ಬಿರುಕುಗಳನ್ನು ಬಿಡದೇ ತಡಕಾಡಿ ಉತ್ತರದ ರೂಪದಲ್ಲಿ ಕಂಡುಕೊಂಡದ್ದು.

ಪಾರಂಪರಿಕ ಕೃಷಿ ಬದುಕಿನ ಜಿವಂತಿಕೆಯ ಧನಾತ್ಮಕ ಅಂಶಗಳನ್ನು ಹೀರಾ, ಇಂದು ತಾವು ಮಾತ್ರ ಹೀರಿಕೊಂಡು ಕುಳಿತಿಲ್ಲ. ಸುತ್ತ ಮುತ್ತಲಿನ ಹತ್ತಾರು ರೈತರನ್ನೂ ಈ ನಿಟ್ಟಿನಲ್ಲಿ ಪ್ರೇರೇಪಿಸುತ್ತಿದ್ದಾರೆ. ನೀರಿಲ್ಲದೇ ನಲುಗಿದ ಯಾವುದೇ ಭೂಮಿಯ ನಟ್ಟ ನಡುವೆ ಹೋಗಿ ನಿಂತ ಸ್ಥಳೀಯರಿಗೆ ಬುದ್ಧಿ ಹೇಳುತ್ತಿದ್ದಾರೆ. ಸಭೆ- ಸಮಾರಂಭಗಳಿಗೆ ಹೋಗಿ ಕತೆ-ಕವನಗಳ ಮೂಲಕ ನೀರೆಚ್ಚರ ಮೂಡಿಸುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಿಗೆ ಹೋಗಿ ಉಪನ್ಯಾಸ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.

ಒಬ್ಬ ಸಾಮಾನ್ಯ ರೈತನಿಗೆ ಇಷ್ಟೆಲ್ಲ ಸಾಸಲಾದದ್ದು ಹೇಗೆ ಎಂದು ಪ್ರಶ್ನಿಸಿದರೆ, ಹೀರಾ ಅಷ್ಟೇ ಮುಗ್ಧವಾಗಿ 'ಹಂಗೇನಿಲ್ಲ ಸರ, ಚಿಕ್ಕವ್ರ ಇದ್ದಾಗ ಸಾಲಿಗೂ ಹೋಗಲಾರದ ನೀರಿಗಾಗಿ ಎಷ್ಟ್ ಕಷ್ಟ ಬಿದ್ದೇವಿ ಅಂದ್ರ, ಅದಾ ಎಲ್ಲ ಕಲಿಶಿಕೊಟ್ಟು ಬಿಡ್ತು. ಹೊಲ-ಮನಿ ಉಳಿಶಿಕೊಂಬೋ ಜರೂರಿತ್ತಲ್ಲ, ಅದಕ್ಕಾಗಿ ಏನಾದರೊಂದು ಮಾಡಾಬೇಕಿತ್ತು. ಏನೇನಾರ ಮಾಡೋ ಬದ್ಲು, ಅದರಾಗ ಸೋಲು ಉಣ್ಣೊ ಬದ್ಲು, ಮಳಿ ನೀರು ಹಿಡಕೊಳ್ಳೋಕ ಹೊಂಟ್ವಿ. ತಂತಾನ ಹೊಲ-ಮನಿ ಅಷ್ಟೇ ಅಲ್ಲ ಇಡೀ ಊರೇ ನಲಿದಾಡಕ್ಕೆ ಹತ್ಯಿತು.' ಎಂದುತ್ತರಿಸುತ್ತಾರೆ.

'ಕತಿ ಹೇಳಕೊಂತ ಹೊಂಟ್ರ ಭಾಳ ಇದಾವು ಬಿಡ್ರೀ ಸಾಹೇಬ್ರ...' ಎನ್ನುತ್ತಲೇ ಹೀರಾ ತಮ್ಮ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ. ಅದು ೧೯೭೨ರ ಸುಮಾರು. ಆಗಿನ್ನೂ ಅವರು ವಿದ್ಯಾರ್ಥಿ ದೆಸೆಯಲ್ಲಿದ್ದರು. ಗುಲ್ಬರ್ಗದ ಶರಣ ಬಸಪ್ಪ ದೇವಾಲಯ ಶಾಲೆಯಲ್ಲಿ ಓದುತ್ತಿದ್ದರು. ಆ ವರ್ಷ ಮಳೆಯೇ ಆಗಲಿಲ್ಲ. ಭೋಸ್ಗಾ ಕೆರೆ ಬತ್ತಿತು. ಗುಲ್ಬರ್ಗ ಕೆರೆಯೂ ಒಣಗಿತು. ಸುತ್ತಲೆಲ್ಲೂ ನೀರಿಲ್ಲದೇ ೧೫ ದಿನ ಶಾಲೆಗೇ ರಜೆ ಘೋಷಿಸಲಾಯಿತು. ಇದೇ ನೀರಿನ ಕೆಲಸಕ್ಕೆ ಪ್ರೇರಣೆ ಒದಗಿಸಿತು.

ಊರಿಗೆ (ರುದ್ರವಾಡಿ) ಹೋದರೆ ಅಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕುಡಿಯಲೂ ನೀರಿಲ್ಲದ ಪರಿಸ್ಥಿತಿ. ರಾತ್ರಿ ಎರಡು ಗಂಟೆಗೆ ಊರ ಮುಂದಿನ ೪೦ ಅಡಿ ಆಳದ ಬಾವಿಯ ಮೆಟ್ಟಿಲಿಳಿದು ಕೆಳಗೆ ಹೋಗಿ ಅಲ್ಪ ಸ್ವಲ್ಪ ಸಂಗ್ರಹಗೊಂಡಿದ್ದ ನೀರನ್ನೇ ಲೋಟದಲ್ಲಿ ಕೆರೆದೂ, ಕೆರೆದು ಕೊಡಕ್ಕೆ ತುಂಬಿಸಿಕೊಂಡು ಬರಬೇಕಿತ್ತು. ಮಳೆ ನೀರು ಸಂಗ್ರಹದ ಯೋಚನೆ ಬಂದದ್ದೇ ಆಗ. ಮುಂದಿನ ಮಳೆಯ ಹೊತ್ತಿಗೆ ಹೊಲದ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳಕ್ಕೆ ಒಡ್ಡು ಹಾಕಿ, ಹರಿದು ಹೋಗುತ್ತಿದ್ದ ಮಳೆ ನೀರನ್ನು ನಿಲ್ಲಿಸಿಕೊಳ್ಳಲಾಯಿತು.

ನೀರಿನ ಇಂಥ ಪರದಾಟ ಗುಲ್ಬರ್ಗದ ಶಾಲೆಗೆ ಶರಣು ಹೊಡೆಸಿತು. ಊರಿನ ಪಕ್ಕದ ಹೊದ್ಲೂರು ಶಾಲೆಗೆ ಸೇರಿದ್ದಾಯಿತು. ಪ್ರತಿದಿನ ಶಾಲೆ ಬಿಟ್ಟು ಹೊಲದ ಮೇಲೆಯೇ ಹಾದು ಬರಬೇಕಿತ್ತು. ಆಗೆಲ್ಲ ಕಣ್ಣಿಗೆ ಕತ್ತಲು ಕವಿಯುವವರೆಗೂ ಕಲ್ಲು ಮಣ್ಣು ತಂದು ಹಳ್ಳದ ಒಡ್ಡು ಎತ್ತರಿಸುವ ಕಾರ್ಯ ಮಾಡಲಾಗುತ್ತಿತ್ತು. ಇಲ್ಲಿ ನಿಂತದ್ದು ಬಸಿ ನೀರಾಗಿ ಬಾವಿಗೆ ಬಂದಿಳಿದಾಗ ಸಂತಸವೋ ಸಂತಸ.

೮೦ರ ದಶಕಕ್ಕೆ ಬರುವಷ್ಟರಲ್ಲಿ ಓದು ನಿಲ್ಲಿಸಿ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಾಗಿತ್ತು. ೮೭ರವರೆಗೂ ಎಲ್ಲವೂ ಸುಸೂತ್ರವಾಗಿ ಸಾಗಿತ್ತು. ೧೯ ಎಕರೆಯ ಜಮೀನಿನಲ್ಲಿ ಮೊದಲೇ ಇದ್ದ ಬಾವಿಯನ್ನು ಇನ್ನಷ್ಟು ಆಳ ಮಾಡಿ ಹೇಗೊ ಬೆಳೆಗಳಿಗೆ ನೀರು ಒದಗಿಸಲಾಗುತ್ತಿತ್ತು. ಆ ವರ್ಷ ಮತ್ತೆ ಅಟಕಾಯಿಸಿಕೊಂಡ ಬರ 'ಬೋರ್‌ವೆಲ್ ಜಮಾನ'ಕ್ಕೆ ರೈತರನ್ನು ಕೊಂಡೊಯ್ದಿತ್ತು. ಹೀರಾರ ಪಕ್ಕದ ಜಮೀನಿನವ ೩೦೦ ಅಡಿಯ ಬೋರ್ ಕೊರೆಸಿದ್ದೇ ತಡ ಇದ್ದೊಂದು ಬಾವಿಯೂ ಬತ್ತಿತು. ಅನಿವಾರ್ಯವಾಗಿ ಹೀರಾ ಸಹ ಬೋರ್‌ವೆಲ್‌ನ ಮೊರೆ ಹೋದರು. ಅಂತರ್ಜಲ ಹೆಚ್ಚಳ ಉಪಾಯ ಕಂಡದ್ದೇ ಆಗ. ನಾಲೆ ಮಾಡಿ ಮಳೆ ನೀರನ್ನು ಬೋರ್‌ಗೆ ಹರಿಸಲಾಯಿತು. ಆದರೆ ಇದೂ ಹೆಚ್ಚು ದಿನ ಬಾಳಲಿಲ್ಲ. ಮುಂದಿನ ಬೇಸಿಗೆ ಹೊತ್ತಿಗೆ ಪಕ್ಕದ ಬೋರ್‌ವೆಲ್‌ನ ಆಳ ಹೆಚ್ಚಿಸಿದಾಗ ಹೀರಾರ ಬೋರ್‌ವೆಲ್‌ನೊಳಕ್ಕೆ ಇಳಿಯುತ್ತಿದ್ದ ನೀರು ಒಳಗೊಳಗೇ ಪಕ್ಕದ ಜಮೀನಿಗೆ ಹರಿಯತೊಡಗಿತು. ಇವರದ್ದು ಒಣಗಿ ನಿಂತಿತು.

ಅಕ್ಕ ಪಕ್ಕದಲ್ಲಿ ಅಸ್ತಿತ್ವದಲ್ಲಿದ್ದ ಎರಡು ಬೋರ್‌ವೆಲ್‌ಗಳ ನಡುವೆ ಮತ್ತೊಂದು ಬೋರ್ ಕೊರೆಸಿ ಕೆಳಗಿನ ಪದರದಲ್ಲಿದ್ದ ಬಂಡೆಯನ್ನು ಸೋಟಕಗಳಿಂದ ಸಿಡಿಸಲಾಯಿತು.ನೀರೇನೋ ಸಿಕ್ಕಿತು. ಆದರೆ ಇಂಥ ಸಾಹಸಗಳು ಶಾಶ್ವತವಲ್ಲ ಎಂಬುದನ್ನು ಮನಗಾಣಲು ಹೆಚ್ಚು ದಿನ ಹಿಡಿಯಲಿಲ್ಲ. ಏಕೆಂದರೆ ಸುತ್ತ ಮುತ್ತಲೆಲ್ಲ ಬೋರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ನೀರ ಖಜಾನೆಯನ್ನು ಬರಿದು ಮಾಡುವವರ ಸಂಖ್ಯೆ ಹೆಚ್ಚಿತೇ ವಿನಃ ಅದನ್ನು ತುಂಬುವವರಿರಲಿಲ್ಲ. ಅದೇ ವೇಳೆ ಮಳೆಗಾಲದಲ್ಲಿ ಊರ ಮುಂದಿನ ಹಳ್ಳದಲ್ಲಿ ದಂಡಿಯಾಗಿ ಹರಿದು ವ್ಯರ್ಥವಾಗುತ್ತಿತ್ತು.

ಅದು ೨೦೦೨ರ ಸುಮಾರು. ಶಾಲಾ ದಿನಗಳಲ್ಲಿ ಕಂಡಿದ್ದ ನೀರಿಂಗಿಸುವ ಕನಸು ಮತ್ತೆ ನೆನಪಾಯಿತು. ಒಡ್ಡು, ಇಂಗು ಗುಂಡಿಗಳಿಂದ ಮಾತ್ರ ಸಮಸ್ಯೆಗೆ ಕೊನೆ ಹಾಡಲು ಸಾಧ್ಯ ಎಂದು ನಿಶ್ಚಯಿಸಿದ್ದವರಿಗೆ ನೆರವಾದವರು ಜಲಾನಯನ ಅಭಿವೃದ್ಧಿ ಅಕಾರಿ ಮಲ್ಲಾರೆಡ್ಡಿ. ಅದಾಗಲೇ ತಂದೆಯ ಕಾಲದಿಂದ ಅಸ್ತಿತ್ವದಲ್ಲಿದ್ದ ಚೆಕ್ ಡ್ಯಾಮ್ ಸುಭದ್ರವಾಗಿದ್ದುದು ಕಣ್ಣ ಮುಂದಿತ್ತು. ಇಂಥವೇ ಕೃಷಿ ಹೊಂಡಗಳನ್ನು ಮತ್ತಷ್ಟು ಮಾಡಬಾರದೇಕೆ ಎನಿಸಿತು. ೧೫ ಅಡಿ ಅಗಲ, ೮ ಅಡಿ ಆಳ, ೩೦ ಅಡಿಯಷ್ಟು ಉದ್ದದ ಪುಟ್ಟ ಕೆರೆ ಜಮೀನಿನಲ್ಲಿ ನಿರ್ಮಾಣವಾಯಿತು. ಅದರ ಫಲ ಅಕಾರಿಗಳ ಕಣ್ಣನ್ನೂ ತೆರೆಸಿತು. ಗ್ರಾಮಕ್ಕೆ ೩೦ ಕೃಷಿ ಹೊಂಡಗಳು, ೩ ಕೆರೆ, ೨ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ದೊರೆಯಿತು. ಇಡೀ ಊರವರನ್ನು ಹೀರುಗುಂಡಿಗಳ ನಿರ್ಮಾಣಕ್ಕೆ ಹೀರಾ ಪ್ರೇರೇಪಿಸಿದರು. ಇದೊಂದು ಆಂದೋಲನವಾಯಿತು.

ನೋಡ ನೋಡುತ್ತಿದ್ದಂತೆ ಇಡೀ ಗ್ರಾಮ ಕೃಷಿ ಹೊಂಡಗಳಿಂದಾವೃತವಾಯಿತು. ಮಳೆ ನೀರು ಏನೇ ಹಠ ಮಾಡಿದರೂ ರುದ್ರವಾಡಿಯವರ ಕಾವಲನ್ನು ತಪ್ಪಿಸಿಕೊಂಡು ಹೊರ ಹೋಗದಂತಾಯಿತು. ಕುಳಿತಲ್ಲಿ, ನಿಂತಲ್ಲಿ, ನಡೆದಲ್ಲಿ, ನೆರೆದಲ್ಲಿ ನೀರಿಂಗಿಸುವುದು ಹೇಗೆಂಬುದರ ಬಗ್ಗೆ ಹೀರಾ ಚರ್ಚಿಸಲಾರಂಭಿಸಿದರು. ಓಡಿ ಹೋಗುವ ಮಳೆ ನೀರನ್ನು ಕಟ್ಟಿ ಹಾಕಿ ಇಂಗಿಸಿಕೊಳ್ಳುವುದು ರೈತರ ಸ್ವಭಾವದಂತಾಯಿತು. ರುದ್ರವಾಡಿಯಲ್ಲಿಂದು ಮಳೆ ಸುರಿದರೆ ಸಾಕು. ಅದೊಂದು ಹಬ್ಬ, ಕೋಟಿ ಕೋಟಿ ಲೀಟರ್ ನೀರು ಅಂತರ್ಜಲ ಖಜಾನೆಗೆ ನೇರವಾಗಿ ಹೋಗಿ ಡೆಪಾಸಿಟ್ ಆಗುತ್ತದೆ. ಅದರ ಬಡ್ಡಿಯಲ್ಲೇ ಬೇಸಿಗೆಯನ್ನು ಕಳೆಯುತ್ತಿದ್ದಾರೆ ಜನ. ಯಶಸ್ಸಿನ ಕದ ತೆರೆಯುತ್ತ ಹೋದಂತೆಲ್ಲ ಹೀರಾ ಹೀರೊ ಆದರು. ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂತು. ಖ್ಯಾತಿಯನ್ನು ಪ್ರಯೋಗ, ಪ್ರಯತ್ನಗಳ ಛಾತಿಯಾಗಿ ಪರಿವರ್ತಿಸಿಕೊಂಡರವರು. ರುದ್ರವಾಡಿಯಲ್ಲಿಂದು ಬರದ ರುದ್ರತಾಂಡವ ಇತಿಹಾಸದ ಕತೆಯಾಗಿಯಷ್ಟೇ ಉಳಿದಿದೆ. ಅಂಥ ನೆನಪು ಸಹ ಮಾಸಿ ಹೋಗಲು ಹೆಚ್ಚು ದಿನವಿಲ್ಲ ಎನ್ನುತ್ತಾರೆ ಅವರು ವಿಶ್ವಾಸದಿಂದ.

ಕಾಮೆಂಟ್‌ಗಳಿಲ್ಲ: