ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ 2001, 2002, 2003 ಸತತವಾಗಿ ಮೂರು ವರ್ಷ ಬರ ಬಿದ್ದ ಕಾಲದಲ್ಲಿ ಕುಡಿಯುವ ನೀರಿಗೂ ಬರ ಹಾಲಕೆರೆ ಅನ್ನದಾನಸ್ವಾಮಿಗಳು ಈ ವಿಷಯದ ಬಗ್ಗೆ ಬಹಳ ಚಿಂತಿಸಿದ್ದರು. ತಮ್ಮ ಶಾಲೆ ಮತ್ತು ಕಾಲೇಜುಗಳ ಬಳಕೆಗಾಗಿ ಕೊರೆಸಿದ್ದ ಏಳು ಕೊಳವೆ ಬಾವಿಗಳ ಪೈಕಿ ಐದು ಬಿಕ್ಕತೊಡಗಿದ್ದವು. ಇನ್ನೆರಡು ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಕೇವಲ ಅರ್ಧ ಇಂಚು ನೀರು ಯಾವ ಕ್ಷಣದಲ್ಲಾದರೂ ಕಡಿಮೆಯಾಗುವ ಲಕ್ಷಣವಿತ್ತು. ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಹೇಗೆ ನೀರು ಪೂರೈಸುವುದೆಂದು ಸ್ವಾಮಿಗಳು ಚಿಂತಿತರಾಗಿದ್ದರು. ಅದೆರೀತಿ ನರೇಗಲ್ ಜನರಿಗೆ ಕುಡಿಯವ ನೀರಿಗಾಗಿ ದೊಡ್ಡ ಕೆರೆಯಲ್ಲಿ ತೋಡಿಸಿದ ಕೊಳವೆ ಬಾವಿ ಕೂಡ ವಿಫಲವಾಗುವ ಲಕ್ಷಣಗಳು ಕಂಡಾಗ ಈ ನೀರನ್ನೇ ನೆಚ್ಚಿಕೊಂಡವರು ಜನರು ಹತಾಶರಾಗಿದ್ದರು.
ಅಂತ ಪರಿಸ್ಥಿತಿಯಲ್ಲಿ ಅವರಿಗೆ ನೆನಪಾಗಿದ್ದು 'ಕೆರೆ ನಿರ್ಮಿಸಿ, ನೀರಿನ ಬರ ತಪ್ಪಿಸಿ' ಎಂದು ಹೇಳುತ್ತಿದ್ದ ಅಯ್ಯಪ್ಪ ಮಸಗಿ. ಅದೇ ರೋಣ ತಾಲೂಕಿನ ಈ ಜಲ ತಜ್ಞನನ್ನು ಕರೆಸಿ ಬತ್ತಿದ ಕೊಳವೆಬಾವಿಗಳ ಜವಾಬ್ದಾರಿಯನ್ನು ಒಪ್ಪಿಸಲಾಯಿತು. ಸ್ಥಳ ಪರಿಶೀಲನೆ ನಡೆಸಿದ ಅಯ್ಯಪ್ಪ, ಕೊಳವೆ ಬಾವಿಯ ಸುತ್ತ ಇದ್ದ ಮೂರು ಎಕರೆ ಪಾಳು ಜಮೀನನ್ನು ತಮ್ಮ ಜಲ ಸಂವರ್ಧನೆಗೆ ಆರಿಸಿಕೊಂಡರು. ಸುತ್ತಮುತ್ತಲಿನ ಭೂಮಿಯಲ್ಲಿ ಬಿದ್ದ ಮಳೆ ನೀರು ಬಂದು ಈ ಮೂರು ಎಕರೆ ಪ್ರದೇಶಕ್ಕೆ ಬಂದು ಸೇರುವಂತೆ ಎತ್ತರದ ಒಡ್ಡು ಹಾಕಿ, ಬತ್ತಿದ ಕೊಳವೆ ಬಾವಿಯ ಸುತ್ತ ಸಣ್ಣ ಕೆರೆ ನಿರ್ಮಿಸಿದರು. ಕೊಳವೆ ಬಾವಿಯ ಸುತ್ತ ತಲಾ ೧೦ ಅಡಿ ಆಳ, ಆರು ಅಡಿ ಅಗಲ ಮತ್ತು ಎರಡು ಅಡಿ ದಪ್ಪ ಕಲ್ಲಿನ ಗೋಡೆಯನ್ನು ಕಟ್ಟಲಾಯಿತು. ಕೊಳವೆ ಬಾವಿಯ ಕೇಸಿಂಗ್ ಪೈಪ್‌ನ ಸುತ್ತಮುತ್ತ, ಒಂದು ಚಾಕ್‌ಪೀಸ್ ಗಾತ್ರದ ಸುಮಾರು ೧೦೦-೧೫೦ ರಂಧ್ರಗಳನ್ನು ಕೊರೆಯಲಾಯಿತು. ಇದರ ಸುತ್ತ ೩೦ ಅಡಿ ವ್ಯಾಸ ಹಾಗೂ ಎಂಟು ಅಡಿ ಆಳದ ಗುಂಡಿ ತೆಗೆದು, ಕಲ್ಲು ಮತ್ತು ಮರಳನ್ನು ತುಂಬಲಾಯಿತು. ಮಳೆ ನೀರು ಮರಳು ಮತ್ತು ಕಲ್ಲುಗೋಡೆಯ ಮೂಲಕ ಶೋಧನೆಗೊಂಡು, ನಂತರ ಕೇಸಿಂಗ್ ಪೈಪ್‌ನಲ್ಲಿ ಕೊರೆದ ರಂಧ್ರಗಳ ಮೂಲಕ ಒಳಗೆ ಪ್ರವೇಶಿಸಬೇಕೆನ್ನುವುದು ಇದರ ಉದ್ದೇಶ. ಕೇಸಿಂಗ್ ಪೈಪ್ ಸುತ್ತ ಮೂರು ಸುತ್ತು ಪ್ಲಾಸ್ಟಿಕ್ ಜರಡಿಯನ್ನು ಸುತ್ತಿರುವುದರಿಂದ ಒಳ ಸೇರುವ ನೀರು ಶುದ್ಧವಾಗಿಯೇ ಇರುತ್ತದೆ
ಅಯ್ಯಪ್ಪ ಮಸಗಿಯವರ ಪ್ರಕಾರ ಒಂದು ಎಕರೆ ಪ್ರದೇಶದಲ್ಲಿ ಕೇವಲ ಒಂದು ಇಂಚು ಮಳೆ ಬಿದ್ದರೂ ಸಾಕು, ಒಂದು ಲಕ್ಷ ೪೪೦ ಲೀಟರ್ ನೀರು ಸಂಗ್ರಹವಾಗುತ್ತದೆ. ಸುತ್ತಲಿನ ಪ್ರದೇಶಗಳಿಂದ ನೀರು ಹರಿದು ಬರುತ್ತಿದ್ದರಂತೂ ಇನ್ನೂ ಒಳ್ಳೆಯದು. ಒಂದು ವರ್ಷ ಈ ರೀತಿ ನೀರು ಸಂಗ್ರಹಿಸಿದರೆ ಎಂತಹ ಬೇಸಿಗೆಗೂ ಹೆದರಬೇಕಿಲ್ಲ. ಒಂದು ಹೆಕ್ಟೇರ್ ಜಮೀನಿಗೆ ಒಂದು ಗುಂಟೆ ಕೆರೆ ಇದ್ದರೆ ನೀರಿನ ವಿಷಯದಲ್ಲಿ ರೈತ ಸ್ವಾವಲಂಬಿಯಾಗುತ್ತಾನೆ ಎನ್ನುವುದು ಅವರ ಅಭಿಪ್ರಾಯ.
ಕೆರೆ ನಿರ್ಮಿಸುವುದರಿಂದ ಸಾಕಷ್ಟು ಲಾಭಗಳಿವೆ. ಕೆರೆಯ ನೀರು ಒಂದೆರಡು ದಿನಗಳಲ್ಲಿ ಪೂರ್ತಿಯಾಗಿ ಇಂಗಿಬಿಡುತ್ತದೆ. ಆಗ ಅದೇ ಜಾಗದಲ್ಲಿ ಬಿತ್ತನೆ ಕಾರ್ಯ ನಡೆಸಬಹುದು. ಕಡಿಮೆ ಅವಧಿಯಲ್ಲಿ ಅಗಾಧ ಪ್ರಮಾಣದಲ್ಲಿ ಹರಿದು ಬರುವ ನೀರನ್ನು ನೇರವಾಗಿ ಕೊಳವೆ ಬಾವಿಯ ಮೂಲಕ ಭೂಮಿಗೆ ಸೇರಿಸಲು ಸಾಧ್ಯವಿಲ್ಲವಾದ್ದರಿಂದ ಕೆರೆ ನಿರ್ಮಾಣ ಅನಿವಾರ್ಯ ಎಂಬುದು ಅವರ ಅಭಿಪ್ರಾಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ