ಬುಧವಾರ, ಅಕ್ಟೋಬರ್ 20, 2010

ಪೋಷಕಾಂಶಗಳಾಗಿ ಕಳೆಗಳ ಬಳಕೆ

ಎಲ್ಲೆಂದರಲ್ಲಿ ಬೆಳೆಯುವ ಯೂಪೋಟೋರಿಯಂ, ಪಾರ್ಥೇನಿಯಂ ಮತ್ತು ಹೆಸರು ತಗಚೆ ಮತ್ತಿತರ ಕಳೆ ಸಸ್ಯಗಳನ್ನು ಬಳಸಿಕೊಂಡು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದನ್ನು ಮುಸುಕಿನಜೋಳ, ಸೂರ್ಯಕಾಂತಿ ಮತ್ತಿತರ ಬೆಳೆಗಳಿಗೆ ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.
ನಿರಂತರವಾಗಿ ರಸಗೊಬ್ಬರಗಳನ್ನು ಬಳಸುವುದರಿಂದ ಭೂಮಿಯಲ್ಲಿ ಕ್ರಮೇಣ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುತ್ತದೆ. ಜೈವಿಕ ಉಸಿರಾಟ ನಿಧಾನವಾಗಿ ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡು ಬೇರುಗಳಿಗೆ ಒದಗಿಸುವ ಶಕ್ತಿಯನ್ನು ಸಸ್ಯಗಳು ಕಳೆದುಕೊಳ್ಳುತ್ತವೆ. ಅಲ್ಲದೆ ಮಣ್ಣು ತನ್ನ ಮೂಲ ಸ್ವರೂಪ ಮತ್ತು ಸಂರಚನೆಯನ್ನು ಕಳೆದುಕೊಳ್ಳುತ್ತದೆ. ಕ್ಷಾರಗುಣ ಪಡೆದುಕೊಂಡು ನೀರು ಮತ್ತು ಆಮ್ಲಜನಕ ಹಿಡಿದಿಟ್ಟುಕೊಂಡು ಸಸ್ಯಕ್ಕೆ ಅಗತ್ಯವಿರುವಾಗ ಒದಗಿಸುವಲ್ಲಿ ವಿಫಲವಾಗುತ್ತದೆ. ಈ ಎಲ್ಲದರ ಪರಿಣಾಮ ಮುಂದೊಂದು ದಿನ ಶೂನ್ಯ ಇಳುವರಿಗೆ ಕಾರಣವಾಗಬಹುದು.

ಕಳೆಗಳನ್ನು ಪೋಷಕಾಂಶಗಳಾಗಿ ಬಳಸಿ ಭೂಮಿ ಬಂಜೆಯಾಗುವುದನ್ನು ತಡೆಯಲು ಸಾಧ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ದನಕರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಗಣಿ ಮತ್ತು ಗಂಜಳ ಇತ್ಯಾದಿ ಸಾವಯವ ಪೋಷಕಾಂಶಗಳ ಕೊರತೆ ಹೆಚ್ಚಾಗಿದೆ. ಕಳೆಗಳಾದ ಯೂಪೋಟೋರಿಯಂ,ಪಾರ್ಥೇನಿಯಂ ಮತ್ತು ಹೆಸರು
ಯೂಪೋಟೋರಿಯ
ತಗಚೆಗಳು ಪ್ರಮುಖವಾಗಿ ಮಳೆಗಾಲದಲ್ಲಿ ರಸ್ತೆ ಪಕ್ಕದಲ್ಲಿ, ಬೀಳು ಭೂಮಿಯಲ್ಲಿ, ಹೊಲ-ಗದ್ದೆಯಲ್ಲಿನ ಬದುಗಳಲ್ಲಿ, ಗೋಮಾಳದಲ್ಲಿ, ಆಟದ ಮೈದಾನ, ಹಳ್ಳ-ಕೊಳ್ಳ ಇತ್ಯಾದಿ ಸ್ಥಳಗಳಲ್ಲಿ ಬೆಳೆಯುತ್ತವೆ. ಈ ಕಳೆ ಸಸ್ಯಗಳ ಎಲೆಗಳಲ್ಲಿ 2.63ರಷ್ಟು ಸಾರಜನಕ, ಶೇ. 0.45ರಷ್ಟು ರಂಜಕ, 2.05 ರಷ್ಟು ಪೊಟ್ಯಾಷ್ ಅಂಶಗಳಿವೆ. ಇತರೆ ಪೋಷಕಾಂಶಗಳಾದ ಗಂಧಕ,ಸುಣ್ಣ, ಮ್ಯಾಗ್ನಿಸಿಯಂ ಮತ್ತು ಲಘು ಪೋಷಕಾಂಶಗಳಾದ ಸತು, ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರ ಇತ್ಯಾದಿ ಖನಿಜಾಂಶಗಳೂ ಸ್ವಲ್ಪ ಪ್ರಮಾಣದಲ್ಲಿವೆ.
ಈ ಎಲ್ಲಾ ಕಳೆಗಳ ಬೇರಿನಲ್ಲಿ ರಂಜಕ ಕರಗಿಸುವ ಸೂಕ್ಷ್ಮಾಣುಗಳಿವೆ. ಹೆಸರು ತಡಚೆಯ ಬೇರಿನ ಗಂಟುಗಳಲ್ಲಿ ಸಾರಜನಕವನ್ನು ಸಂಗ್ರಹಿಸುವ ಸಾವಿರಾರು ಸೂಕ್ಷ್ಮಾಣುಗಳಿವೆ. ಈ ಬೇರುಗಳನ್ನು ಕಾಂಪೋಸ್ಟ್ ತಯಾರಿಕೆಯಲ್ಲಿ ಬಳಸುವುದರಿಂದ ಈ ಎಲ್ಲಾ ಸಾಕ್ಷ್ಮಾಣುಗಳು ಕಾಂಪೋಸ್ಟ್‌ನಲ್ಲಿ ಪುನಃ ವೃದ್ಧಿಯಾಗಿಬೆಳೆಗಳಿಗೆ ಬಳಕೆಯಾಗುತ್ತವೆ.

ಪಾರ್ಥೇನಿಯಂ
ಈ ಕಳೆಗಳ ಕಳಿತ ಗೊಬ್ಬರದಿಂದ ಮಣ್ಣಿಗೆ ಸಾವಯವ ಇಂಗಾಲ ದೊರಕುವುದರಿಂದ ಜೈವಿಕ ಆರೋಗ್ಯ ವೃದ್ಧಿಗೊಂಡು ಮಣ್ಣಿನ ರಚನೆ ಉತ್ತಮಗೊಳ್ಳುತ್ತದೆ. ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಕಳಿತ ಗೊಬ್ಬರದಿಂದ ಸಾವಯವ ಆಮ್ಲಗಳು ಬಿಡುಗಡೆಯಾಗಿ ಮಣ್ಣಿನ ರಸಸಾರ ಉತ್ತಮಗೊಂಡು ಮುಖ್ಯ ಮತ್ತು ಲಘು ಪೋಷಕಾಂಶಗಳು ಹೆಚ್ಚಾಗಿ ಬೆಳೆಗಳಿಗೆ ಲಭ್ಯವಾಗುತ್ತವೆ.
ಕಳೆ ಗೊಬ್ಬರ ತಯಾರಿಸುವ ವಿಧಾನ: ಮೇಲೆ ತಿಳಿಸಿದ ಕಳೆಗಳನ್ನು ಸಾಧ್ಯವಾದಲ್ಲಿ ಬೇರು ಸಮೇತ ಅಥವಾ ಕುಡುಗೋಲಿನಿಂದ ಬುಡಮಟ್ಟಕ್ಕೆ ಕೊಯ್ದು ತರಬೇಕು. ನಂತರ 2 ರಿಂದ 3 ಇಂಚಿನಷ್ಟು ಸಣ್ಣದಾಗಿ ಕತ್ತರಿಸಬೇಕು. 1ಟನ್ ಹಸಿರೆಲೆ ಕಳೆ ಗೊಬ್ಬರ ತಯಾರಿಸಲು 3.5 ಅಡಿ ಅಗಲ,3.5 ಅಡಿ ಎತ್ತರ ಮತ್ತು 8 ಅಡಿ ಉದ್ದದ ಸ್ಥಳ ಬೇಕಾಗುತ್ತದೆ.

ಕತ್ತರಿಸಿದ ಕಳೆಗಳನ್ನು 15ರಿಂದ 20 ಸೆಂ.ಮೀ ಗಾತ್ರದ ಪದರಿನ ರೀತಿಯಲ್ಲಿ ಕಾಂಪೋಸ್ಟ್ ಗುಂಡಿಯಲ್ಲಿ ಹರಡಬೇಕು ನಂತರ ಶೇ10ರಷ್ಟು ಹಸಿ ಸಗಣಿ ಬಗ್ಗಡವನ್ನು ಕಳೆಗಳ ಮೇಲೆ ಸಿಂಪಡಿಸಬೇಕು (ಪ್ರತಿ 100 ಕೆ.ಜಿ. ಕಳೆಗಳಿಗೆ 10 ಕೆ.ಜಿ. ಹಸಿ ಸಗಣಿ ಬೇಕಾಗುತ್ತದೆ). ಪುನಃ ಕತ್ತರಿಸಿದ ಕಳೆಗಳನ್ನು 15 ರಿಂದ 20 ಸೆಂಗಳಷ್ಟು ಹಾಕಿ ಅದರ ಮೇಲೆ ಮತ್ತು ಸಗಣಿ ಬಗ್ಗಡವನ್ನು ಹಾಕುತ್ತ ಬನ್ನಿ. ಹೀಗೆ ಹಾಕಿದ ಕಳೆಗಳು ಮತ್ತು ಬಗ್ಗಡದ ಗುಡ್ಡೆ ಎತ್ತರ 3.5 ಅಡಿಗಳಿಗೆ ಮಿತಿಗೊಳಿಸಿ.

ಗುಡ್ಡೆಯ ಮೇಲೆ 2 ಸೆಂ.ಮೀ.ನಷ್ಟು ಕೆಂಪು ಮಣ್ಣಿನ ಪದರದಿಂದ ಮುಚ್ಚಿ ಉಗುರು ಬಿಸಿ ನೀರನ್ನು ಸಿಂಪಡಿಸಿ ಮಣ್ಣನ್ನು ತೊಯಿಸಿ. ತದನಂತರ 30, 45 ಮತ್ತು 60ನೇ ದಿನಗಳಲ್ಲಿ ಕಾಂಪೋಸ್ಟ್ ಗುಡ್ಡೆಯನ್ನು ಸಲಿಕೆಯಿಂದ ಎಲ್ಲಾ ಪದರುಗಳು ಚೆನ್ನಾಗಿ ಮಿಶ್ರವಾಗುವಂತೆ ಮಗುಚಿ. ನಂತರ ಮೊದಲಿನಂತೆ ಮತ್ತೆ 2 ಸೆಂ.ಮೀ ಕೆಂಪು ಮಣ್ಣಿನಿಂದ ಮುಚ್ಚಿ ಉಗುರು ಬಿಸಿ ನೀರು ಸಿಂಪಡಿಸಿ. 90ದಿನಗಳ ವೇಳೆಗೆ ಸಂಪೂರ್ಣವಾಗಿ ಕಳಿತ ಕಳೆಗಳ ಸಾವಯವ ಗೊಬ್ಬರ ಸಿದ್ಧವಾಗುತ್ತದೆ.

ಈ ಕಳೆ ಗೊಬ್ಬರವನ್ನು ಮುಸುಕಿನಜೋಳ ಬಿತ್ತನೆ ಮಾಡುವ ಹತ್ತು ದಿನ ಮೊದಲು ಪ್ರತಿ ಎಕರೆಗೆ ನಾಲ್ಕು ಟನ್‌ಗಳಷ್ಟು ಭೂಮಿಗೆ ಸೇರಿಸಿ. ಇದರಿಂದ ಶೇ.35 ರಿಂದ 40 ರಷ್ಟು ಇಳುವರಿ ಹೆಚ್ಚುತ್ತದೆ. ಸೂರ್ಯಕಾಂತಿ ಬೆಳೆಯಲ್ಲಿ ಶೇ 32 ರಿಂದ 35ರಷ್ಟು ಇಳುವರಿ ಹೆಚ್ಚುತ್ತದೆ. ಮಣ್ಣಿನಲ್ಲಿ ಜೈವಿಕ ಇಂಗಾಲ ವೃದ್ಧಿಯಾಗುತ್ತದೆ. ಪೋಷಕಾಂಶಗಳ ಪ್ರಮಾಣ ಹೆಚ್ಚುತ್ತದೆ. ಜೈವಿಕ ಗುಣಧರ್ಮಗಳೂ ಹೆಚ್ಚಾಗುವುದು ಕಂಡುಬಂದಿದೆ.
ಈ ಕಳೆಗಳನ್ನು ಮೇಲೆ ತಿಳಿಸಿದಂತೆ ಚೆನ್ನಾಗಿ ಕಳಿಸಿದ ನಂತರ ಸಾವಯವ ಗೊಬ್ಬರವನ್ನಾಗಿ ಬಳಸುವುದರಿಂದ ಈ ಕಳೆ ಸಸ್ಯಗಳ ಬೀಜಗಳ ಪ್ರಸಾರ ತಡೆಯಬಹುದು. ಈ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗುವುದು ತಪ್ಪುತ್ತದೆ.

ಕಳೆ ಸಸ್ಯಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಬಗ್ಗೆ ಇನ್ನಷ್ಟು ಮಾಹಿತಿಗಳು ಬೇಕಿದ್ದರೆ ಕಳೆ ನಿರ್ವಹಣ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು ಅಥವಾ ಬೇಸಾಯಶಾಸ್ತ್ರ ವಿಭಾಗ, ಮಂಡ್ಯದ ವಿ.ಸಿ. ಫಾರಂನ ಕೃಷಿ ಮಹಾ ವಿದ್ಯಾಲಯವನ್ನು ಸಂಪರ್ಕಿಸಬಹುದು. ದೂರವಾಣಿ ನಂಬರ್: 080-23515944/ 08232-277211 (ಎಕ್ಸ್-209)

ಕಾಮೆಂಟ್‌ಗಳಿಲ್ಲ: