ಶುಕ್ರವಾರ, ಅಕ್ಟೋಬರ್ 1, 2010

ರೈತಸ್ನೇಹಿ ಜೈವಿಕ ಕೀಟನಾಶಕ

ತರಕಾರಿ ಬೆಳೆಗಳಿಗೆ ಬರುವ ರೋಗಗಳನ್ನು ನಿಯಂತ್ರಿಸುತ್ತಲೇ ಮಣ್ಣಿನ ಫಲವತ್ತತೆ ಯನ್ನು ಕಾಪಾಡಿಕೊಳ್ಳುವ ಜೈವಿಕ ಕೀಟನಾಶಕವೊಂದನ್ನು ಮೈಸೂರಿನ ಹೆಬ್ಬಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಸಂಶೋಧನಾ ಕೇಂದ್ರ ರೂಪಿಸಿದೆ.
ಟೊಮೊಟೊ, ಮೆಣಸಿನಕಾಯಿ, ಕಬ್ಬು, ಬದನೆ, ಹೂ ಕೋಸು, ಎಲೆ ಕೋಸು ಮೊದಲಾದ ಬೆಳೆಗಳನ್ನು ಬೆಳೆಯುವ ಮೈಸೂರು ಹಾಗೂ ಸುತ್ತಮುತ್ತಲಿನ ರೈತರ ಮೊಗದಲ್ಲಿ ಈಗ ಸ್ವಲ್ಪ ನೆಮ್ಮದಿಯ ಭಾವವನ್ನು ಗುರುತಿಸಬಹುದು. ಈ ರೈತರು ಉತ್ತಮ ಇಳುವರಿ ಪಡೆಯುವುದರ ಜೊತೆಗೆ ಮಣ್ಣಿನ ಫಲವತ್ತತೆ ಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದಾರೆ. ರಾಸಾಯನಿಕ ಕೀಟನಾಶಕಗಳನ್ನು ಬಳಸದೆ ಕೇವಲ ಜೈವಿಕ ಕೀಟನಾಶಕಗಳನ್ನು ಬಳಸಿ ಪರಿಸರ ಸ್ನೇಹಿ ಬೇಸಾಯ ಮಾಡುತ್ತಿದ್ದಾರೆ.
ಕರ್ನಾಟಕ ತೋಟಗಾರಿಕೆ ಇಲಾಖೆ ಅನುಮೋದಿಸಿರುವ ಪೋನಾಲ್ಯಾಬ್ (ಬಯೋಕಂಟ್ರೋಲ್ ಲ್ಯಾಬ್) ಭಾರತ ಸರ್ಕಾರ, ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಿಂದ ಮಾನ್ಯತೆ ಪಡೆದಿದೆ. ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ತಲೆ ಎತ್ತಿರುವ ಈ ಸಂಶೋಧನಾ ಕೇಂದ್ರ ನಿತ್ಯ ಬಳಕೆಯ ತರಕಾರಿ ಗಿಡಗಳು, ಪ್ಲಾಂಟೇಶನ್ ಹಾಗೂ ದ್ವಿದಳ ಧಾನ್ಯ ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಸಸ್ಯ ಫಂಗಲ್ ಮತ್ತು ಬ್ಯಾಕ್ಟೀರಿಯಾ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆಸುತ್ತಿದೆ. ಬೇಸಾಯದಲ್ಲಿ ರೈತರಿಗೆ ಸಾಮಾನ್ಯವಾಗಿ ಎದುರಾಗುವ ತೊಂದರೆಗಳನ್ನು ನಿವಾರಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಉತ್ತಮ ಫಸಲನ್ನು ಪಡೆಯುವ ಸಲುವಾಗಿ ಜೈವಿಕ ಕೀಟನಾಶಕವೊಂದನ್ನು ಅಭಿವೃದ್ಧಿಪಡಿಸಿದೆ.
ಜೈವಿಕ ಕೀಟನಾಶಕ ತಯಾರಿಕೆ ಬೇಕಾದ ಅಂಶಗಳನ್ನು ವಿವಿಧ ರೀತಿಯ ಮಣ್ಣು ಮತ್ತು ಸಸ್ಯಗಳ ಭಾಗಗಳಿಂದಲೇ ಸಂಗ್ರಹಿಸುತ್ತಾರೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ಜೈವಿಕ ಕೀಟನಾಶಕವನ್ನು ಸಸ್ಯಗಳಿಗೆ ಸಿಂಪಡಿಸುವುದರಿಂದ ಅವುಗಳ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಲು ಸಹಾಯ ಮಾಡುತ್ತದೆ. ಜೈವಿಕ ಕೀಟನಾಶಕದಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಣ್ಣಿನ ಸುತ್ತಲೂ ಹರಡಿಕೊಂಡು ಉತ್ತಮ ಪೋಷಕಾಂಶ ಒದಗಿಸುವುದರ ಜೊತೆಗೆ ಅಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತವೆ. ಜೈವಿಕ ಕೀಟನಾಶಕಗಳು ಸಸ್ಯ ಬೆಳವಣಿಗೆಗೆ ಅವಶ್ಯಕವಾಗಿ ಬೇಕಾದ ಪೋಷಕಾಂಶಗಳಾದ ಪಾಸ್ಫರಸ್, ನೈಟ್ರೋಜನ್, ಸಲ್ಫರ್‌ಗಳನ್ನು ಸಸ್ಯಗಳಿಗೆ ಹೇರಳವಾಗಿ ಒದಗಿಸುತ್ತವೆ.
ಸಸ್ಯ ಸಂಬಂಧಿ ರೋಗಗಳು ಮಣ್ಣಿನಿಂದ, ಬೀಜಗಳಿಂದ ಹಾಗೂ ಗಾಳಿ ಮೂಲಕ ಹರಡುತ್ತವೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ಜೈವಿಕ ಕೀಟನಾಶಕ ಸಸ್ಯಗಳನ್ನು ಬಾಧಿಸುವ ಎಲ್ಲ ಬಗೆಯ ರೋಗಗಳನ್ನು ಸಮರ್ಥವಾಗಿ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಸಸ್ಯದ ಪೋಷಣೆಗೆ ಬೇಕಾದ ಸೂಕ್ತ ಪೋಷಕಾಂಶಗಳು, ಸೂಕ್ಷ್ಮಾಣು ಜೀವಿಗಳನ್ನು ನಿಸರ್ಗದಿಂದಲೇ ಸಂಗ್ರಹಿಸಿ ಅದನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ ಯಶಸ್ಸುಕಂಡಿದೆ. ಸಸ್ಯಗಳು ತಮ್ಮ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನಿಸರ್ಗದಿಂದಲೇ ಪಡೆದುಕೊಳ್ಳಲು ಈ ಜೈವಿಕ ಕೀಟನಾಶಕ ನೆರವಾಗುವುದರಿಂದ ಸಸ್ಯಗಳ ಫಲವಂತಿಕೆ ಮಟ್ಟ ಅಧಿಕವಾಗಿರುತ್ತದೆ. ಈ ಕೀಟನಾಶಕ ಸಸ್ಯಕ್ಕೆ ತಗಲುವ ಹಲವು ರೋಗಗಳ ವಿರುದ್ಧ ಏಕ ಕಾಲದಲ್ಲಿ ಹೋರಾಡುವ ಗುಣ ಹೊಂದಿದೆ.

ಈ ಜೈವಿಕ ಕೀಟನಾಶಕವನ್ನು ಮೂರು ರೀತಿಯಲ್ಲಿ ಸಸ್ಯಗಳಿಗೆ ಉಪಯೋಗಿಸಬಹುದು. ದ್ರವರೂಪದ ಕೀಟನಾಶಕವನ್ನು ಸಸ್ಯಗಳಿಗೆ ನೇರವಾಗಿ ಸಿಂಪಡಣೆ ಮಾಡಬಹುದು. ಜೈವಿಕ ಕೀಟನಾಶಕದ ಪೌಡರನ್ನು ಸಸ್ಯದ ಬೇರಿನ ಸುತ್ತ ಮಣ್ಣಿನಲ್ಲಿ ಮಿಶ್ರಣ (ಸಾಯಿಲ್ ಡ್ರೆಂಚಿಂಗ್) ಮಾಡಬಹುದು. ನರ್ಸರಿ ಮಾಡುವ ಸಂದರ್ಭದಲ್ಲಿ ತೆಂಗಿನ ತುರಿಯನ್ನು ಸಂಗ್ರಹಿಸಿ (ಕೋಕೋ ಪೀಟ್ ಮಿಕ್ಸಿಂಗ್) ಅದರೊಟ್ಟಿಗೆ ಪೌಡರ್ ಮಿಶ್ರಣ ಮಾಡಿ ಸಸ್ಯಗಳನ್ನು ಬೆಳೆಸಿದಾಗ ಉತ್ತಮ ಫಲಿತಾಂಶ ಲಭ್ಯವಾಗಿದೆ.

ಜೈವಿಕ ಕೀಟನಾಶಕವನ್ನು ಸಸ್ಯಗಳ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಪಡೆದ ಅನೇಕ ರೈತರು ಮೈಸೂರಿನ ಸುತ್ತಮುತ್ತ ಇದ್ದಾರೆ. ಎಲ್ಲ ರೀತಿಯ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಸಸ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳಾದ ಮಿಲ್‌ಡಿವ್ ಆಫ್ ಗಾರ್ಡ್ಸ್, ವಿಲ್ಟ್, ಬ್ಲೈಟ್ ಅಂಡ್ ಡೈಬ್ಯಾಕ್ ರೋಗಗಳನ್ನು ತಡೆಗಟ್ಟುವಲ್ಲಿ ಈ ಜೈವಿಕ ಕೀಟನಾಶಕ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಮೈಸೂರು ಪ್ರಾಂತ್ಯದಲ್ಲಿರುವ ಗುಜ್ಜೇಗೌಡನಪುರದ ಬಸವೇಶ್ವರ ನರ್ಸರಿ, ಮಾದಳ್ಳಿ ಗೇಟ್‌ನಲ್ಲಿರುವ ಮಹದೇಶ್ವರ ನರ್ಸರಿ, ಆಲನಹಳ್ಳಿಯಲ್ಲಿರುವ ಬಸವೇಶ್ವರ ಹೈಟೆಕ್ ನರ್ಸರಿಗಳು ಜೈವಿಕ ಕೀಟನಾಶಕ ಬಳಸಿ ಉತ್ತಮ ಫಲಿತಾಂಶ ಪಡೆದುಕೊಂಡಿರುವ ಫಲಾನುಭವಿಗಳು. ಲಭ್ಯವಿರುವ ಉತ್ಪನ್ನಗಳು ಪೋನಾಸ್ಟಾರ್ ಮತ್ತು ಕೌಶಿಕ್.
ಹೆಚ್ಚಿನ ಮಾಹಿತಿಗೆ ರೈತರು ಸಂಪರ್ಕಿಸಬೇಕಾದ ವಿಳಾಸ: ಪೋನಾಲ್ಯಾಬ್, ಎ-76, 4ನೇ ಮುಖ್ಯರಸ್ತೆ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೈಸೂರು-16. ದೂರವಾಣಿ ಸಂಖ್ಯೆ 0821- 2419995, ಮೊಬೈಲ್ 94498 72722, 94804 99999 ಸಂಪರ್ಕಿಸಿ.

ಕಾಮೆಂಟ್‌ಗಳಿಲ್ಲ: