ಗುರುವಾರ, ಅಕ್ಟೋಬರ್ 28, 2010

ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಕುವುದರಿಂದ ಯಾರಿಗೆ ಲಾಭ?

ಸರಕಾರದ ಯೋಜನೆಗಳಿಂದ ನಿಜವಾಗಿ ಲಾಭ ಯಾರಿಗೆ? ಕೇಂದ್ರ ಸರಕಾರದ ಯೋಜನೆಯೊಂದನ್ನು ಪರಿಶೀಲಿಸೋಣ. ಈ ಯೋಜನೆಯ ಪ್ರಕಾರ, ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಕೃಷಿಗಾಗಿ ನೀರಿನ ಲಭ್ಯತೆ ಹೆಚ್ಚಿಸಲಿಕ್ಕಾಗಿ ತೋಡುವ ಕೃಷಿಹೊಂಡಗಳಿಗೆ ಶೇಕಡಾ ೧೦೦ ಸಬ್ಸಿಡಿ. ಮಳೆನೀರು ಸಂಗ್ರಹಿಸುವ ಈ ಕೃಷಿಹೊಂಡಗಳ ತಳ ಹಾಗೂ ಬದಿಗಳಿಂದ ಮಣ್ಣಿನಾಳಕ್ಕೆ ನೀರು ಇಂಗಿ ಹೋಗದಂತೆ ಪ್ಲಾಸ್ಟಿಕ್ ಹಾಳೆ ಹಾಸುವ ತಂತ್ರದ ಬಳಕೆ.
ಆರಂಭದಲ್ಲಿ ಅಲ್ಲಿನ ಕೃಷಿಕರು ಈ ಯೋಜನೆಯನ್ನು ಸ್ವಾಗತಿಸಲಿಲ್ಲ. ಕ್ರಮೇಣ ಯೋಜನೆಗೆ ಅರ್ಜಿ ಹಾಕಿ, ಕೃಷಿಹೊಂಡಗಳನ್ನು ಅಗೆಯಲು ಶುರುಮಾಡಿದರು. ಫಲಾನುಭವಿಗಳು ಪ್ರತಿಯೊಬ್ಬರೂ ೦.೬ ಹೆಕ್ಟೇರ್ ಕೃಷಿಭೂಮಿಯಲ್ಲಿ ಹೊಂಡ ತೋಡಬೇಕಾಯಿತು. ಈ ಹೊಂಡಗಳು ತಯಾರಾಗುತ್ತಿದ್ದಂತೆಯೇ, ಅವುಗಳಿಗೆ ಪ್ಲಾಸ್ಟಿಕ್ ಹಾಳೆ ಒದಗಿಸಲು ಆಯ್ಕೆಯಾದ ಕಂಪೆನಿಗಳ ಮಾರಾಟ ತಂತ್ರ ಬಯಲಾಯಿತು! ಆ ಕಂಪೆನಿಗಳು ೫೦೦ ಮೈಕ್ರೋನ್ ದಪ್ಪದ ಪ್ಲಾಸ್ಟಿಕ್ ಹಾಳೆಗಳ ಬೆಲೆಯನ್ನು ಚದರ ಮೀಟರಿಗೆ ರೂ.೧೬ರಿಂದ ರೂ.೧೮ ಏರಿಸಿದವು. ಇದರಿಂದಾಗಿ ಪ್ರತಿಯೊಂದು ಕೃಷಿಹೊಂಡಕ್ಕೆ ಪ್ಲಾಸ್ಟಿಕ್ ಹಾಳೆ ಹಾಸುವ ವೆಚ್ಚ ರೂ.೫೦,೦೦೦ದಿಂದ ರೂ.೬೦,೦೦೦ ಹೆಚ್ಚಾಯಿತು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರಕಾರ ಮಹಾರಾಷ್ಟ್ರದಲ್ಲಿ ೧೭,೫೦೦ ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸಲಿಕ್ಕಾಗಿ ಕೇಂದ್ರ ಸರಕಾರ ಮಂಜೂರು ಮಾಡಿರುವುದು ರೂಪಾಯಿ ೮೦ ಕೋಟಿ. ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ತಡೆಯಲಿಕ್ಕಾಗಿ ಒಂದು ಸಮಿತಿ ರಚಿಸಲಾಯಿತು. ಅದರ ಸದಸ್ಯರು ಅಂತಿಮವಾಗಿ ೫೦೦ ಮೈಕ್ರೋನ್ ದಪ್ಪದ ಜೀಯೊಮೆಂಬ್ರೇನ್ ಪ್ಲಾಸ್ಟಿಕ್ ಹಾಳೆಗಳನ್ನು ಸರಬರಾಜು ಮಾಡಲಿಕ್ಕಾಗಿ ೩ ಉತ್ಪಾದನಾ ಕಂಪೆನಿಗಳನ್ನು ಆಯ್ಕೆ ಮಾಡಿದರು. ಈ ಯೋಜನೆ ನಂಬಿ ಕೃಷಿಹೊಂಡ ತೋಡಿದ ರೈತರಿಗೆ, ಕಂಪೆನಿಗಳ ತಂತ್ರದಿಂದಾಗಿ ದೊಡ್ಡ ಆತಂಕ ಎದುರಾಯಿತು. ಹೆಚ್ಚುವರಿ ಮೊತ್ತ ಯಾರು ಪಾವತಿಸಬೇಕು? ರಾಜ್ಯ ತೋಟಗಾರಿಕಾ ಮಿಷನ್‍ನ ಅಧಿಕಾರಿಗಳು 'ಶಿಫಾರಸ್ ಮಾಡಲಾಗಿದೆ' ಎನ್ನುತ್ತಲೇ ಕಾಲ ತಳ್ಳಿದರು.
ಆದರೆ ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸುವುದು ಅಗತ್ಯವೇ? "ಪ್ಲಾಸ್ಟಿಕ್ ಹಾಳೆ ಹಾಸುವುದು ಅಲ್ಪಕಾಲಿಕ ವಿಧಾನ. ಇದರಿಂದ ಒಂದು ಬೆಳೆಗಾಗಿ ನೀರು ಸಂಗ್ರಹಿಸಲು ರೈತರಿಗೆ ಸಾಧ್ಯವಾದೀತೆ ಹೊರತು. ಅಂತರ್ಜಲಮಟ್ಟ ಏರುವುದಿಲ್ಲ. ಆದ್ದರಿಂದ ಈ ಯೋಜನೆಗಾಗಿ ದುಬಾರಿ ವೆಚ್ಚ ಮಾಡೋದು ಸಮಂಜಿಸವೆ?" 'ಈ ಹೊಂಡಗಳ ಹೂಳು ತೆಗೆಯುವಾಗ ಪ್ಲಾಸ್ಟಿಕ್ ಹಾಳೆಗಳಿಗೆ ತೂತುಗಳು ಆಗೋದಿಲ್ಲವೇ?' ಕೃಷಿಕರಿಗೆ ಸಹಾಯ ಮಾಡುವ ನೆಪದಲ್ಲಿ ಈ ದೇಶದಲ್ಲಿ ಏನೇನು ಆಗುತ್ತಿದೆ, ನೋಡಿ! ಸರಕಾರದ ಇಂತ ಯೋಜನೆಗಳಿಂದ ನಿಜವಾಗಿ ಯಾರಿಗೆ ಲಾಭ?

ಕಾಮೆಂಟ್‌ಗಳಿಲ್ಲ: