ಸೋಮವಾರ, ಅಕ್ಟೋಬರ್ 25, 2010

ಕುಡಿಯಲು ಯೋಗ್ಯವಾದ ನೀರು ಯಾವುದು?

'ಮಳೆ ನೀರು ಕುಡಿಯಬಹುದಾ?'
ಎಲ್ಲೆಡೆ ಕೇಳಿಬರುವ ಅತ್ಯಂತ ಸಾಮಾನ್ಯ ಪ್ರಶ್ನೆಯಿದು. ಹಾಗೆ ನೋಡಿದರೆ, ಮಳೆ ನೀರೇ ಕುಡಿಯಲು ಅತ್ಯಂತ ಯೋಗ್ಯವಾದ ನೀರು. ಅಂತರ್ಜಲ ಅತಿ ಶುದ್ಧ ನೀರು ಎಂಬ ನಂಬಿಕೆ ಬಹಳಷ್ಟು ಜನರಿಗಿದೆ. ಇದು ತಪ್ಪು. ಏಕೆಂದರೆ, ಅಂತರ್ಜಲ ಭೂಮಿಯೊಳಗಿನ ಲವಣಾಂಶಗಳನ್ನು ಕರಗಿಸಿಕೊಂಡಿರುತ್ತದೆ. ನೂರಾರು ವರ್ಷಗಳ ಕಾಲ ಶೇಖರಣೆಗೊಂಡ ನೀರದು. ನೋಡಲು ಶುದ್ಧವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಅದು ಕುಡಿಯಲು ಯೋಗ್ಯ ಎಂದು ಭಾವಿಸುವುದು ಅಪಾಯಕಾರಿ.
ಆದರೆ, ಮಳೆ ನೀರಿಗೆ ಈ ಸಮಸ್ಯೆ ಇಲ್ಲ. ಅದು ಆಕಾಶದಿಂದ ನೇರವಾಗಿ ಭೂಮಿಗೆ ಬಿದ್ದಿರುತ್ತದೆ. ಭೂಮಿಗೆ ಬೀಳುವಾಗ ವಾಯುಪದರಗಳನ್ನು ಹಾಯ್ದು ಬರುವಾಗ ಕೊಂಚ ಮಲಿನಗೊಳ್ಳಬಹುದು. ಅದೂ ಮೊದಲ ಮಳೆಯ ಕಾಲಕ್ಕೆ ಮಾತ್ರ. ನಂತರ ಬೀಳುವ ಮಳೆಯ ನೀರು ಬಹುತೇಕ ಶುದ್ಧವಾಗಿರುತ್ತದೆ. ಮೋಡಗಳಿಂದ ಮನೆಯ ಚಾವಣಿ ಮೇಲೆ ಬೀಳುವ ಮಳೆ ನೀರಿಗಿಂತ ಶುದ್ಧ ನೀರು ಬೇಕೆ? ನಮ್ಮ ಚಾವಣಿ ಸ್ವಚ್ಛವಾಗಿದ್ದರೆ, ಶೋಧಕಗಳ ಹಂಗಿಲ್ಲದೇ ನೀರನ್ನು ನೇರವಾಗಿ ಕುಡಿಯಬಹುದು. ಅದಕ್ಕಿರುವ ರುಚಿ, ಜಗತ್ತಿನ ಯಾವುದೇ ಮಿನರಲ್‌ ವಾಟರ್‌ಗೂ ಇಲ್ಲ.
ಆದರೂ, ಸ್ವಚ್ಛತಾ ಪ್ರಜ್ಞೆಯಿಂದಾಗಿ, ಮಳೆ ನೀರನ್ನು ಸೋಸಿ ಕುಡಿಯುವುದು ಉತ್ತಮ. ಏಕೆಂದರೆ, ಚಾವಣಿ ಎಷ್ಟೇ ಸ್ವಚ್ಛವಾಗಿದ್ದರೂ ಅದು ವಾತಾವರಣಕ್ಕೆ ತೆರೆದುಕೊಂಡಿರುವಂಥದು. ದೂಳು ಮತ್ತೊಂದು ಇದ್ದೇ ಇರುತ್ತದೆ. ಹೀಗೆ ಸಂಗ್ರಹಿಸಿದ ಮಳೆ ನೀರು ಗಾಳಿ ಹಾಗೂ ಸೂರ್ಯನ ಬೆಳಕಿಗೆ ಬಾರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಸೂರ್ಯನ ಬೆಳಕು ಮತ್ತು ಗಾಳಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಹೀಗಾಗಿ, ಮಳೆ ನೀರು ಸಂಗ್ರಹದ ತೊಟ್ಟಿ ಬಿಸಿಲು ಮತ್ತು ಗಾಳಿಗೆ ಒಡ್ಡಿಕೊಳ್ಳದ ರೀತಿ ನಿರ್ಮಾಣವಾಗಬೇಕು. ಏಕೆಂದರೆ, ಒಂದು ವೇಳೆ ನೀರಿನಲ್ಲಿ ಯಾವುದೇ ಜೀವಾಣುಗಳು ಇದ್ದರೂ, ಸೂರ್ಯನ ಬೆಳಕು-ಗಾಳಿ ದೊರೆಯದೇ ಹೋದಾಗ, ಅವು ತಂತಾನೇ ನಿರ್ನಾಮವಾಗುತ್ತವೆ.

 ಫಿಲ್ಟರ್‌ನ ಸುಲಭ ವಿಧಾನ
ಮಳೆ ನೀರನ್ನು ಶೋಧಿಸಲು ಹಲವಾರು ವಿಧಾನಗಳಿವೆ. ಸರಳ ವಿಧಾನ ಎಂದರೆ ಮರಳು ಶೋಧಕ. ಈ ವಿಧಾನದಲ್ಲಿ ಜೆಲ್ಲಿ (ಸಣ್ಣ) ಕಲ್ಲು, ಕೊಂಚ ದಪ್ಪ ಜೆಲ್ಲಿ ಹಾಗೂ ಮರಳಿನ ಹಾಸಿನ ಮೂಲಕ ಮಳೆ ನೀರನ್ನು ಹಾಯಿಸಲಾಗುತ್ತದೆ. ಸುಮಾರು ನಾಲ್ಕು ಅಡಿ ಎತ್ತರದ ಟ್ಯಾಂಕ್ ಇದೆ ಎಂದಾದರೆ, ಅದರ ಕೆಳ ಭಾಗದಲ್ಲಿ ಒಂದು ಅಡಿ ದಪ್ಪ ಜೆಲ್ಲಿ ಕಲ್ಲು ತುಂಬಬೇಕು. ನಂತರ ಅಷ್ಟೇ ಎತ್ತರದಲ್ಲಿ ಸಣ್ಣ ಜೆಲ್ಲಿ ತುಂಬಿ, ಅದರ ಮೇಲೆ ಒಂದಡಿ ಎತ್ತರಕ್ಕೆ ಮರಳನ್ನು ತುಂಬಬೇಕು. ಇಷ್ಟಾದರೆ ಸಾಕು. ಮರಳನ್ನು ಪದೆ ಪದೆ ತೊಳೆಯುವುದು ಕಷ್ಟವಾದ್ದರಿಂದ, ಅದರ ಮೇಲೆ ತೆಳ್ಳಗಿನ ಸ್ಪಂಜ್‌ ಹಾಳೆಯನ್ನು ಹೊದಿಸಬಹುದು. ಹೀಗೆ ಸಿದ್ಧವಾದ ಶೋಧಕ ಟ್ಯಾಂಕಿನ ಕೆಳಭಾಗಕ್ಕೆ ಶುದ್ಧ ನೀರು ಹೋಗುವ ಕಡೆ ಒಂದು ನಲ್ಲಿ ಜೋಡಿಸಿದರೆ ಮುಗೀತು. ಚಾವಣಿ ನೀರು ಶೋಧಕ ಪ್ರವೇಶಿಸುವ ಪೈಪ್‌ನ ಕೆಳಭಾಗಕ್ಕೆ ಒಂದು ಶುದ್ಧ ಬಟ್ಟೆಯನ್ನು ಪದರಾಗಿ ಮಡಿಚಿ ಕಟ್ಟಿದರೆ, ನೀರಿನ ಫಿಲ್ಟರ್‌ ರೆಡಿ.
ತಡಮಾಡದೆ ಮಳೆ ನೀರು ಸಂಗ್ರಹಿಸಿ. ವರ್ಷಪೂರ್ತಿ ನಿಶ್ಚಿಂತೆಯಿಂದ ಬಳಸಿ.

ಕಾಮೆಂಟ್‌ಗಳಿಲ್ಲ: