ಶುಕ್ರವಾರ, ಅಕ್ಟೋಬರ್ 15, 2010

ಅದ್ಭುತ ಸಸ್ಯ ಕಹಿ ಬೇವು

ಕಹಿ ಬೇವು ಒಂದು ಉತ್ತಮ ಬಹುಪಯೋಗಿ, ಪರಿಸರಪ್ರೇಮಿ ವೃಕ್ಷ. ರೈತರು ಇದನ್ನು ಬೆಳೆಸಿ ಲಾಭ ಪಡೆಯಬಹುದಾಗಿದೆ.
ಕಹಿ ಬೇವು ಉಷ್ಣ ಪ್ರದೇಶದ ಸದಾ ಹಸಿರಾಗಿರುವ ಸಸ್ಯ ಪ್ರಭೇದ. ಮೂಲತಃ ಭಾರತ ಉಪಖಂಡಕ್ಕೆ ಸೇರಿದ್ದು. ಆದರೆ ಜಗತ್ತಿನ ಇತರ ಭಾಗಗಳಲ್ಲೂ ಬೆಳೆಯಬಲ್ಲದು.

ಫಲವತ್ತಾದ ಜಮೀನಿನಲ್ಲಿ ಕ್ಷಿಪ್ರಗತಿಯಲ್ಲಿ ಸೊಂಪಾಗಿ ಬೆಳೆಯುವ ಈ ಮರ ಬಂಜರು ಭೂಮಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲೂ ಬೆಳೆಯುತ್ತದೆ. ಸರಾಸರಿ ಎತ್ತರ 15 ರಿಂದ 50 ಅಡಿ. ಜೀವಿತಾವಧಿ ಸುಮಾರು 150 ರಿಂದ 200 ವರ್ಷ. ತಾಯಿ ಬೇರು ಬಲವಾಗಿರುವುದರಿಂದ ಭೂಮಿಯ ಗಟ್ಟಿ ಪದರವನ್ನು ಸಡಿಲಗೊಳಿಸಿ ಆಳದಲ್ಲಿರುವ ಪೋಶಕಾಂಶಗಳನ್ನು ಹೀರಿ ಹುಲುಸಾಗಿ ಬೆಳೆಯಬಲ್ಲದು. ಆದರೆ ಎಳೆಯ ಸಸಿಗಳು ನೆರಳಿನಲ್ಲಿ ಚೆನ್ನಾಗಿ ಬೆಳೆಯಲಾರವು.

ಕಹಿ ಬೇವಿನ ಬೀಜಗಳಿಂದ ಸಸಿಗಳನ್ನು ತಯಾರಿಸಬಹುದು. ನೆಟ್ಟ ಮೊದಲ ವರ್ಷ ಇವುಗಳ ಬೆಳವಣಿಗೆ ನಿಧಾನ ಗತಿಯಲ್ಲಿರುತ್ತದೆ. ನಂತರದ ವರ್ಷಗಳಲ್ಲಿ ತ್ವರಿತಗೊಳ್ಳುತ್ತದೆ. ನೀರು ನಿಲ್ಲುವ ಜಮೀನಿನಲ್ಲಿ ಇವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಬೇವಿನ ಮರಗಳನ್ನು ಜಮೀನಿನ ಅಂಚಿನಲ್ಲಿ ಅಥವಾ ಹೊಲದ ಮಧ್ಯದಲ್ಲಿ ಸಾಲಾಗಿ ನೆಡಬಹುದಾಗಿದೆ. ವಾಸದ ಮನೆಯ ಹಿಂದೆ ಅಥವಾ ಮುಂದುಗಡೆ ಸಹ ಬೆಳೆಸಬಹುದು.

ಬೇವಿನ ಮರಗಳ ನೆಡುತೋಪನ್ನು ಪ್ರತ್ಯೇಕವಾಗಿ ಮಾಡಬೇಕಾದರೆ ಆ ಸ್ಥಳವನ್ನು ಸ್ವಚ್ಛಗೊಳಿಸಿ ಅನುಕೂಲ­ವಾದ ಅಂತರದಲ್ಲಿ (5ಮೀ+ 5ಮೀ ಅಥವಾ 8ಮೀ+8ಮೀ) 0.5 ಘನ ಮೀಟರ್ ಗುಂಡಿಗಳನ್ನು ತೋಡಬೇಕು. ಅದರಲ್ಲಿ ಉತ್ತಮ ಸಸಿಗಳನ್ನು ನೆಟ್ಟು ಆರೈಕೆ ಮಾಡಬೇಕು. ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕನಿಷ್ಠ 3 ರಿಂದ 4 ಬೇವಿನ ಮರ ಬೆಳೆಸಿದಲ್ಲಿ ಅಂದಾಜು 2000 ರೂಪಾಯಿ ಆದಾಯ ಗಳಿಸಬಹುದಾಗಿದೆ.

ಪ್ರಾಮುಖ್ಯತೆ: ಕಹಿ ಬೇವಿನ ಮರದ ಎಲೆ, ಕಾಂಡ, ಬೇರು, ಹೂವು ಮತ್ತು ಬೀಜಗಳನ್ನು ಔಷಧವಾಗಿ ಉಪಯೋಗಿಸುತ್ತಿದ್ದ ಬಗ್ಗೆ 4500 ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಶತಮಾನಗಳ ಹಿಂದೆಯೇ ಗ್ರಾಮೀಣ ಔಷಧಾಲಯಗಳೆಂದು ಈ ಮರಗಳನ್ನು ಕರೆಯಲಾಗುತ್ತಿತ್ತು. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ತಜ್ಞರು ಉಪಯುಕ್ತವಾದ ಗಿಡಮರಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ಕಹಿ ಬೇವನ್ನು ಗ್ರಾಮೀಣ ಜನರು ತಮ್ಮ ಜಮೀನಿನ ಅಕ್ಕಪಕ್ಕಗಳಲ್ಲಿ, ಶಾಲಾ ಆವರಣಗಳಲ್ಲಿ, ರಸ್ತೆಗಳ ಎರಡೂ ಪಕ್ಕಗಳಲ್ಲಿ ಬೆಳೆಸುತ್ತಿರುವುದನ್ನು ಗಮನಿಸಿದ್ದರು. ನಂತರ ಆಳವಾಗಿ ಅಧ್ಯಯನ ಮಾಡಿ ಅದರ ಅದ್ಭುತ ಉಪಯುಕ್ತ ಮಾಹಿತಿಗಳನ್ನು ಜಗತ್ತಿಗೆ ತಿಳಿಸಿದ ಮೇಲೆ ಇದಕ್ಕೆ ಇನ್ನಷ್ಟು ಮಹತ್ವ ಬಂತು.

ಎಲ್ಲಾ ಗಿಡಮರಗಳ ಪೈಕಿ ಕಹಿಬೇವಿನ ಮರವು ಮಾನವ ಜನಾಂಗದ ಅತ್ಯುತ್ತಮ ಬಹುಪಯೋಗಿ ಸದಾ ಹಸಿರಾಗಿರುವ ಆರೋಗ್ಯಕರ ಮರ. ಕಹಿ ಬೇವಿನ ಮರಗಳು ಹೆಚ್ಚು ಆಮ್ಲಜನಕವನ್ನು ವಾತಾವರಣದಲ್ಲಿ ಬಿಡುಗಡೆ ಮಾಡುವ ಗುಣಗಳನ್ನು ಹೊಂದಿದ್ದು ವಾಯುಮಾಲಿನ್ಯ ನಿಯಂತ್ರಣದಲ್ಲಿ ಇಡಲು ಸಹಕಾರಿ.

ಕಹಿ ಬೇವಿನ ಬಗ್ಗೆ ಎರಡು ದಶಕಗಳಿಂದ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸಾವಯವ ಗೊಬ್ಬರ, ಕೀಟನಾಶಕ, ಶಿಲೀಂದ್ರನಾಶಕ, ಔಷಧ ಹಾಗೂ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಅದು ನಾನಾ ರೂಪದಲ್ಲಿ ಪ್ರಯೋಜನಕಾರಿ. ಇದರಿಂದ ಬಡ ಮತ್ತು ಶ್ರೀಮಂತ ರಾಷ್ಟ್ರಗಳು ಪ್ರಯೋಜನಗಳನ್ನು ಪಡೆಯುತ್ತಿದೆ. ಆದುದರಿಂದ ಕಹಿ ಬೇವು ಒಂದು ಅದ್ಭುತ ಗಿಡ.

ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯತ್ತ ಹೆಚ್ಚು ಗಮನ ಹರಿಸಿರುವ ರೈತರು ಕಹಿ ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿ­ಸುತ್ತಿದ್ದಾರೆ. ಕಹಿ ಬೇವಿನ ಹಿಂಡಿಯಲ್ಲಿ ಸಾರಜನಕ, ರಂಜಕ, ಪೊಟ್ಯಾಶ್, ಇಂಗಾಲ, ಸಲ್ಪರ್, ಕ್ಯಾಲ್ಸಿಯಂ, ಮೆಗ್ನೇಶಿಯಂ ಮುಂತಾದ ಪೋಷಕಾಂಶಗಳಿವೆ. ಬೇವಿನ ಎಣ್ಣೆಯನ್ನು ಕೀಟನಾಶಕವಾಗಿ, ಶಿಲೀಂದ್ರನಾಶಕವಾಗಿ ಬಳಸುತ್ತಿದ್ದಾರೆ. ಬೇವಿನ ಎಣ್ಣೆಯಿಂದ ತಯಾರಿಸಿದ ಕೀಟನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯ.
ಇವುಗಳು ಕೆಲವು ಬೆಳೆಗಳ ಕೀಟಗಳನ್ನು ನಿಯಂತ್ರಿಸುತ್ತವೆ. ಅಷ್ಟೇ ಅಲ್ಲದೆ ಪರಿಸರಪ್ರೇಮಿ. ಕಹಿಬೇವಿನ ಎಣ್ಣೆಯನ್ನು ಸೊಳ್ಳೆ ನಿವಾರಕವಾಗಿ ಬಳಸಬಹುದಾಗಿದೆ.

ಮಾರುಕಟ್ಟೆಯಲ್ಲಿ ಕಹಿಬೇವಿನ ಸಾಬೂನು, ಶಾಂಪೂ, ಟೂತ್‌ಪೇಸ್ಟ್, ಟೂತ್‌ಪೌಡರ್, ಕೀಟನಾಶಕ, ಶಿಲೀಂದ್ರ­­ನಾಶಕ, ಕ್ರೀಮ್ ಇತ್ಯಾದಿಲಭ್ಯ.

ಕಾಮೆಂಟ್‌ಗಳಿಲ್ಲ: