ಗುರುವಾರ, ಅಕ್ಟೋಬರ್ 28, 2010

ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಕುವುದರಿಂದ ಯಾರಿಗೆ ಲಾಭ?

ಸರಕಾರದ ಯೋಜನೆಗಳಿಂದ ನಿಜವಾಗಿ ಲಾಭ ಯಾರಿಗೆ? ಕೇಂದ್ರ ಸರಕಾರದ ಯೋಜನೆಯೊಂದನ್ನು ಪರಿಶೀಲಿಸೋಣ. ಈ ಯೋಜನೆಯ ಪ್ರಕಾರ, ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಕೃಷಿಗಾಗಿ ನೀರಿನ ಲಭ್ಯತೆ ಹೆಚ್ಚಿಸಲಿಕ್ಕಾಗಿ ತೋಡುವ ಕೃಷಿಹೊಂಡಗಳಿಗೆ ಶೇಕಡಾ ೧೦೦ ಸಬ್ಸಿಡಿ. ಮಳೆನೀರು ಸಂಗ್ರಹಿಸುವ ಈ ಕೃಷಿಹೊಂಡಗಳ ತಳ ಹಾಗೂ ಬದಿಗಳಿಂದ ಮಣ್ಣಿನಾಳಕ್ಕೆ ನೀರು ಇಂಗಿ ಹೋಗದಂತೆ ಪ್ಲಾಸ್ಟಿಕ್ ಹಾಳೆ ಹಾಸುವ ತಂತ್ರದ ಬಳಕೆ.
ಆರಂಭದಲ್ಲಿ ಅಲ್ಲಿನ ಕೃಷಿಕರು ಈ ಯೋಜನೆಯನ್ನು ಸ್ವಾಗತಿಸಲಿಲ್ಲ. ಕ್ರಮೇಣ ಯೋಜನೆಗೆ ಅರ್ಜಿ ಹಾಕಿ, ಕೃಷಿಹೊಂಡಗಳನ್ನು ಅಗೆಯಲು ಶುರುಮಾಡಿದರು. ಫಲಾನುಭವಿಗಳು ಪ್ರತಿಯೊಬ್ಬರೂ ೦.೬ ಹೆಕ್ಟೇರ್ ಕೃಷಿಭೂಮಿಯಲ್ಲಿ ಹೊಂಡ ತೋಡಬೇಕಾಯಿತು. ಈ ಹೊಂಡಗಳು ತಯಾರಾಗುತ್ತಿದ್ದಂತೆಯೇ, ಅವುಗಳಿಗೆ ಪ್ಲಾಸ್ಟಿಕ್ ಹಾಳೆ ಒದಗಿಸಲು ಆಯ್ಕೆಯಾದ ಕಂಪೆನಿಗಳ ಮಾರಾಟ ತಂತ್ರ ಬಯಲಾಯಿತು! ಆ ಕಂಪೆನಿಗಳು ೫೦೦ ಮೈಕ್ರೋನ್ ದಪ್ಪದ ಪ್ಲಾಸ್ಟಿಕ್ ಹಾಳೆಗಳ ಬೆಲೆಯನ್ನು ಚದರ ಮೀಟರಿಗೆ ರೂ.೧೬ರಿಂದ ರೂ.೧೮ ಏರಿಸಿದವು. ಇದರಿಂದಾಗಿ ಪ್ರತಿಯೊಂದು ಕೃಷಿಹೊಂಡಕ್ಕೆ ಪ್ಲಾಸ್ಟಿಕ್ ಹಾಳೆ ಹಾಸುವ ವೆಚ್ಚ ರೂ.೫೦,೦೦೦ದಿಂದ ರೂ.೬೦,೦೦೦ ಹೆಚ್ಚಾಯಿತು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರಕಾರ ಮಹಾರಾಷ್ಟ್ರದಲ್ಲಿ ೧೭,೫೦೦ ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸಲಿಕ್ಕಾಗಿ ಕೇಂದ್ರ ಸರಕಾರ ಮಂಜೂರು ಮಾಡಿರುವುದು ರೂಪಾಯಿ ೮೦ ಕೋಟಿ. ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ತಡೆಯಲಿಕ್ಕಾಗಿ ಒಂದು ಸಮಿತಿ ರಚಿಸಲಾಯಿತು. ಅದರ ಸದಸ್ಯರು ಅಂತಿಮವಾಗಿ ೫೦೦ ಮೈಕ್ರೋನ್ ದಪ್ಪದ ಜೀಯೊಮೆಂಬ್ರೇನ್ ಪ್ಲಾಸ್ಟಿಕ್ ಹಾಳೆಗಳನ್ನು ಸರಬರಾಜು ಮಾಡಲಿಕ್ಕಾಗಿ ೩ ಉತ್ಪಾದನಾ ಕಂಪೆನಿಗಳನ್ನು ಆಯ್ಕೆ ಮಾಡಿದರು. ಈ ಯೋಜನೆ ನಂಬಿ ಕೃಷಿಹೊಂಡ ತೋಡಿದ ರೈತರಿಗೆ, ಕಂಪೆನಿಗಳ ತಂತ್ರದಿಂದಾಗಿ ದೊಡ್ಡ ಆತಂಕ ಎದುರಾಯಿತು. ಹೆಚ್ಚುವರಿ ಮೊತ್ತ ಯಾರು ಪಾವತಿಸಬೇಕು? ರಾಜ್ಯ ತೋಟಗಾರಿಕಾ ಮಿಷನ್‍ನ ಅಧಿಕಾರಿಗಳು 'ಶಿಫಾರಸ್ ಮಾಡಲಾಗಿದೆ' ಎನ್ನುತ್ತಲೇ ಕಾಲ ತಳ್ಳಿದರು.
ಆದರೆ ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸುವುದು ಅಗತ್ಯವೇ? "ಪ್ಲಾಸ್ಟಿಕ್ ಹಾಳೆ ಹಾಸುವುದು ಅಲ್ಪಕಾಲಿಕ ವಿಧಾನ. ಇದರಿಂದ ಒಂದು ಬೆಳೆಗಾಗಿ ನೀರು ಸಂಗ್ರಹಿಸಲು ರೈತರಿಗೆ ಸಾಧ್ಯವಾದೀತೆ ಹೊರತು. ಅಂತರ್ಜಲಮಟ್ಟ ಏರುವುದಿಲ್ಲ. ಆದ್ದರಿಂದ ಈ ಯೋಜನೆಗಾಗಿ ದುಬಾರಿ ವೆಚ್ಚ ಮಾಡೋದು ಸಮಂಜಿಸವೆ?" 'ಈ ಹೊಂಡಗಳ ಹೂಳು ತೆಗೆಯುವಾಗ ಪ್ಲಾಸ್ಟಿಕ್ ಹಾಳೆಗಳಿಗೆ ತೂತುಗಳು ಆಗೋದಿಲ್ಲವೇ?' ಕೃಷಿಕರಿಗೆ ಸಹಾಯ ಮಾಡುವ ನೆಪದಲ್ಲಿ ಈ ದೇಶದಲ್ಲಿ ಏನೇನು ಆಗುತ್ತಿದೆ, ನೋಡಿ! ಸರಕಾರದ ಇಂತ ಯೋಜನೆಗಳಿಂದ ನಿಜವಾಗಿ ಯಾರಿಗೆ ಲಾಭ?

ಸೋಮವಾರ, ಅಕ್ಟೋಬರ್ 25, 2010

ಕುಡಿಯಲು ಯೋಗ್ಯವಾದ ನೀರು ಯಾವುದು?

'ಮಳೆ ನೀರು ಕುಡಿಯಬಹುದಾ?'
ಎಲ್ಲೆಡೆ ಕೇಳಿಬರುವ ಅತ್ಯಂತ ಸಾಮಾನ್ಯ ಪ್ರಶ್ನೆಯಿದು. ಹಾಗೆ ನೋಡಿದರೆ, ಮಳೆ ನೀರೇ ಕುಡಿಯಲು ಅತ್ಯಂತ ಯೋಗ್ಯವಾದ ನೀರು. ಅಂತರ್ಜಲ ಅತಿ ಶುದ್ಧ ನೀರು ಎಂಬ ನಂಬಿಕೆ ಬಹಳಷ್ಟು ಜನರಿಗಿದೆ. ಇದು ತಪ್ಪು. ಏಕೆಂದರೆ, ಅಂತರ್ಜಲ ಭೂಮಿಯೊಳಗಿನ ಲವಣಾಂಶಗಳನ್ನು ಕರಗಿಸಿಕೊಂಡಿರುತ್ತದೆ. ನೂರಾರು ವರ್ಷಗಳ ಕಾಲ ಶೇಖರಣೆಗೊಂಡ ನೀರದು. ನೋಡಲು ಶುದ್ಧವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಅದು ಕುಡಿಯಲು ಯೋಗ್ಯ ಎಂದು ಭಾವಿಸುವುದು ಅಪಾಯಕಾರಿ.
ಆದರೆ, ಮಳೆ ನೀರಿಗೆ ಈ ಸಮಸ್ಯೆ ಇಲ್ಲ. ಅದು ಆಕಾಶದಿಂದ ನೇರವಾಗಿ ಭೂಮಿಗೆ ಬಿದ್ದಿರುತ್ತದೆ. ಭೂಮಿಗೆ ಬೀಳುವಾಗ ವಾಯುಪದರಗಳನ್ನು ಹಾಯ್ದು ಬರುವಾಗ ಕೊಂಚ ಮಲಿನಗೊಳ್ಳಬಹುದು. ಅದೂ ಮೊದಲ ಮಳೆಯ ಕಾಲಕ್ಕೆ ಮಾತ್ರ. ನಂತರ ಬೀಳುವ ಮಳೆಯ ನೀರು ಬಹುತೇಕ ಶುದ್ಧವಾಗಿರುತ್ತದೆ. ಮೋಡಗಳಿಂದ ಮನೆಯ ಚಾವಣಿ ಮೇಲೆ ಬೀಳುವ ಮಳೆ ನೀರಿಗಿಂತ ಶುದ್ಧ ನೀರು ಬೇಕೆ? ನಮ್ಮ ಚಾವಣಿ ಸ್ವಚ್ಛವಾಗಿದ್ದರೆ, ಶೋಧಕಗಳ ಹಂಗಿಲ್ಲದೇ ನೀರನ್ನು ನೇರವಾಗಿ ಕುಡಿಯಬಹುದು. ಅದಕ್ಕಿರುವ ರುಚಿ, ಜಗತ್ತಿನ ಯಾವುದೇ ಮಿನರಲ್‌ ವಾಟರ್‌ಗೂ ಇಲ್ಲ.
ಆದರೂ, ಸ್ವಚ್ಛತಾ ಪ್ರಜ್ಞೆಯಿಂದಾಗಿ, ಮಳೆ ನೀರನ್ನು ಸೋಸಿ ಕುಡಿಯುವುದು ಉತ್ತಮ. ಏಕೆಂದರೆ, ಚಾವಣಿ ಎಷ್ಟೇ ಸ್ವಚ್ಛವಾಗಿದ್ದರೂ ಅದು ವಾತಾವರಣಕ್ಕೆ ತೆರೆದುಕೊಂಡಿರುವಂಥದು. ದೂಳು ಮತ್ತೊಂದು ಇದ್ದೇ ಇರುತ್ತದೆ. ಹೀಗೆ ಸಂಗ್ರಹಿಸಿದ ಮಳೆ ನೀರು ಗಾಳಿ ಹಾಗೂ ಸೂರ್ಯನ ಬೆಳಕಿಗೆ ಬಾರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಸೂರ್ಯನ ಬೆಳಕು ಮತ್ತು ಗಾಳಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಹೀಗಾಗಿ, ಮಳೆ ನೀರು ಸಂಗ್ರಹದ ತೊಟ್ಟಿ ಬಿಸಿಲು ಮತ್ತು ಗಾಳಿಗೆ ಒಡ್ಡಿಕೊಳ್ಳದ ರೀತಿ ನಿರ್ಮಾಣವಾಗಬೇಕು. ಏಕೆಂದರೆ, ಒಂದು ವೇಳೆ ನೀರಿನಲ್ಲಿ ಯಾವುದೇ ಜೀವಾಣುಗಳು ಇದ್ದರೂ, ಸೂರ್ಯನ ಬೆಳಕು-ಗಾಳಿ ದೊರೆಯದೇ ಹೋದಾಗ, ಅವು ತಂತಾನೇ ನಿರ್ನಾಮವಾಗುತ್ತವೆ.

 ಫಿಲ್ಟರ್‌ನ ಸುಲಭ ವಿಧಾನ
ಮಳೆ ನೀರನ್ನು ಶೋಧಿಸಲು ಹಲವಾರು ವಿಧಾನಗಳಿವೆ. ಸರಳ ವಿಧಾನ ಎಂದರೆ ಮರಳು ಶೋಧಕ. ಈ ವಿಧಾನದಲ್ಲಿ ಜೆಲ್ಲಿ (ಸಣ್ಣ) ಕಲ್ಲು, ಕೊಂಚ ದಪ್ಪ ಜೆಲ್ಲಿ ಹಾಗೂ ಮರಳಿನ ಹಾಸಿನ ಮೂಲಕ ಮಳೆ ನೀರನ್ನು ಹಾಯಿಸಲಾಗುತ್ತದೆ. ಸುಮಾರು ನಾಲ್ಕು ಅಡಿ ಎತ್ತರದ ಟ್ಯಾಂಕ್ ಇದೆ ಎಂದಾದರೆ, ಅದರ ಕೆಳ ಭಾಗದಲ್ಲಿ ಒಂದು ಅಡಿ ದಪ್ಪ ಜೆಲ್ಲಿ ಕಲ್ಲು ತುಂಬಬೇಕು. ನಂತರ ಅಷ್ಟೇ ಎತ್ತರದಲ್ಲಿ ಸಣ್ಣ ಜೆಲ್ಲಿ ತುಂಬಿ, ಅದರ ಮೇಲೆ ಒಂದಡಿ ಎತ್ತರಕ್ಕೆ ಮರಳನ್ನು ತುಂಬಬೇಕು. ಇಷ್ಟಾದರೆ ಸಾಕು. ಮರಳನ್ನು ಪದೆ ಪದೆ ತೊಳೆಯುವುದು ಕಷ್ಟವಾದ್ದರಿಂದ, ಅದರ ಮೇಲೆ ತೆಳ್ಳಗಿನ ಸ್ಪಂಜ್‌ ಹಾಳೆಯನ್ನು ಹೊದಿಸಬಹುದು. ಹೀಗೆ ಸಿದ್ಧವಾದ ಶೋಧಕ ಟ್ಯಾಂಕಿನ ಕೆಳಭಾಗಕ್ಕೆ ಶುದ್ಧ ನೀರು ಹೋಗುವ ಕಡೆ ಒಂದು ನಲ್ಲಿ ಜೋಡಿಸಿದರೆ ಮುಗೀತು. ಚಾವಣಿ ನೀರು ಶೋಧಕ ಪ್ರವೇಶಿಸುವ ಪೈಪ್‌ನ ಕೆಳಭಾಗಕ್ಕೆ ಒಂದು ಶುದ್ಧ ಬಟ್ಟೆಯನ್ನು ಪದರಾಗಿ ಮಡಿಚಿ ಕಟ್ಟಿದರೆ, ನೀರಿನ ಫಿಲ್ಟರ್‌ ರೆಡಿ.
ತಡಮಾಡದೆ ಮಳೆ ನೀರು ಸಂಗ್ರಹಿಸಿ. ವರ್ಷಪೂರ್ತಿ ನಿಶ್ಚಿಂತೆಯಿಂದ ಬಳಸಿ.

ಭಾನುವಾರ, ಅಕ್ಟೋಬರ್ 24, 2010

ಯುಪ­ಟೋ­ರಿಯಂ ಉತ್ತಮ ಹಸಿರು ಗೊಬ್ಬ­ರ­

ಗೊಬ್ಬರ ಗಲಾಟೆ ಇತ್ತೀ­ಚೆಗೆ ಸಾಮಾ­ನ್ಯ­ವಾ­ಗಿದೆ. ರಸ­ಗೊ­ಬ್ಬರ ಇಲ್ಲ­ದಿ­ದ್ದರೆ ಕೃಷಿ ಇಲ್ಲ ಎನ್ನುವ ಸ್ಥಿತಿ ಬಂದಿದೆ. ಉತ್ತಮ ಇಳು­ವ­ರಿಗೆ ರಸ­ಗೊ­ಬ್ಬ­ರವೇ ಬೇಕೆಂ­ದಿಲ್ಲ. ನಮ್ಮ ಪರಿ­ಸ­ರ­ದಲ್ಲಿ ಇರುವ ನಿರು­ಪ­ಯುಕ್ತ ಎಂದು ತಿಳಿ­ಯುವ ಕಳೆ ಗಿಡ­ದಲ್ಲಿ ರಸ­ಗೊ­ಬ್ಬ­ರ­ದಲ್ಲಿ ಸಿಗುವ ಪೋಷ­ಕಾಂ­ಶ­ಗಳು ದೊರೆ­ಯು­ತ್ತವೆ ಎನ್ನು­ವುದು ಸಂಶೋ­ಧ­ನೆ­ಯಿಂದ ಸಾಬೀತು ಮಾಡಿ­ದ್ದಾರೆ.

ಸ್ಥಳೀ­ಯ­ವಾಗಿ ಪಾರ್ಥೇ­ನಿಯಂ ಕಾಂಗ್ರೆಸ್‌, ಕಮ್ಯು­ನಿಸ್ಟ್‌, ಲಾಟಾನಾ ಎಂದು ಕರೆ­ಸಿ­ಕೊ­ಳ್ಳುವ ಯುಪ­ಟೋ­ರಿ­ಯಂನ ಸಸ್ಯ ಶಾಸ್ತ್ರೀಯ ಹೆಸರು ಕ್ರೊಮೋ­ಲೀನಾ ಒಡೊ­ರಟ. ಪಶ್ಚಿಮ ಘಟ್ಟ ಪ್ರದೇ­ಶ­ದಲ್ಲಿ ಎಲ್ಲೆಂ­ದ­ರಲ್ಲಿ ಕಾಣುವ ಈ ಸಸ್ಯ­ಗ­ಳನ್ನು ನಿಷ್ಪ್ರ­ಯೋ­ಜಕ ಎಂದು ಎಲ್ಲರೂ ಭಾವಿ­ಸಿ­ದ್ದಾರೆ. ಆದರೆ ಇದ­ರಲ್ಲಿ ಭೂಮಿ­ಯನ್ನು ಫಲ­ವ­ತ್ತತೆ ಮಾಡುವ ಗುಣ­ವಿದೆ ಎಂದು ಕೃಷಿ ಸಂಶೋ­ಧನಾ ಕೇಂದ್ರ(ಭತ್ತ) ಶಿರಸಿ ಇವರು ಕಂಡು­ಕೊಂ­ಡಿ­ದ್ದಾರೆ.
 ಹಸಿರು ಗೊಬ್ಬ­ರ­ವಾಗಿ ಯುಪ­ಟೋ­ರಿಯಂ ಬಳಕೆ  : 1996ರಿಂದ  ಕೃಷಿ  ಸಂಶೋ­ಧನಾ  ಕೇಂದ್ರ ( ಭತ್ತ) ದಲ್ಲಿ ಪ್ರಾಯೋ­ಗಿ­ಕ­ವಾಗಿ ಬೆಳೆಗೆ ಯುಪ­ಟೋ­ರಿಯಂ ಗಿಡ­ಗ­ಳನ್ನು ಪೋಷ­ಕಾಂ­ಶ­ವಾಗಿ ಬಳಸಿ ಸಂಶೋ­ಧನೆ ನಡೆ­ಸಿ­ದ್ದಾರೆ. ಸಾಮಾ­ನ್ಯ­ವಾಗಿ ಯುಪ­ಟೋ­ರಿಯಂ ಗಿಡ ಜುಲೈ, ಆಗಸ್ಟ್‌ ತಿಂಗ­ಳಿ­ನಲ್ಲಿ ಎಳೆಯ ಗಿಡ­ವಾ­ಗಿ­ರು­ತ್ತದೆ. ಅದರ ಕಾಂಡ­ಗ­ಳನ್ನು ಕಡಿದು ಹಾಕಿ­ದರೆ ಸುಲ­ಭ­ವಾಗಿ ಕೊಳೆ­ಯು­ತ್ತದೆ. ಯುಪ­ಟೋ­ರಿಯಂ ಗಿಡ­ಗಳು ಇಂತಹ ಹಂತ­ದಲ್ಲಿ ಇರು­ವಾಗ ಭತ್ತ ನಾಟಿ ಮಾಡುವ ಸಮ­ಯವು ಬಂದಿ­ರು­ತ್ತದೆ.

ರಸ­ಗೊ­ಬ್ಬ­ರದ ಗೊಡವೆ ಬೇಡ ಎನ್ನುವ ರೈತರು ಒಂದು ಎಕ­ರೆಗೆ ನಾಲ್ಕು ಸಾವಿರ ಕಿಲೋ­ದಷ್ಟು ಯುಪ­ಟೋ­ರಿಯಂ ಗಿಡ­ಗ­ಳನ್ನು ಗದ್ದೆಗೆ ಹಾಕ­ಬೇಕು. ನೀರಿ­ರುವ ಹೊಲ­ಗ­ಳಲ್ಲಿ ಒಂದೆ­ರಡು ದಿನ ಈ ಕತ್ತ­ರಿಸಿ ಹಾಕಿದ ಯುಪ­ಟೋ­ರಿಯಂ ಗಿಡ ಕೊಳೆ­ಯು­ತ್ತದೆ. ಆಗ ಟಿಲ್ಲರ್‌ ಮೂಲಕ ಅಥವಾ ಪಡ್ಲರ್‌ ಮುಖೇನ ಮಿಶ್ರಣ ಮಾಡಿ­ದರೆ. ರಸ­ಗೊ­ಬ್ಬ­ರ­ದಿಂದ ಸಿಗು­ವಷ್ಟೇ ಪೋಷ­ಕಾಂಶ ಇದ­ರಿಂ­ದಲೂ ಸಿಗು­ತ್ತದೆ.

ಯುಪ­ಟೋ­ರಿಯಂ ಗಿಡ­ಗ­ಳಲ್ಲಿ ಸಾರ­ಜ­ನಕ, ರಂಜಕ ಮತ್ತು ಪೋಟಾಷ್‌ ಸಾಕಷ್ಟು ಪ್ರಮಾ­ಣ­ದಲ್ಲಿ ಇರು­ತ್ತದೆ. ಇದ­ಲ್ಲದೆ, ಮಧ್ಯಮ ಪೋಷ­ಕಾಂ­ಶ­ಗ­ಳಾದ ಕ್ಯಾಲಿ­ಸಿಯಂ, ಮ್ಯಾಂಗ್ನೇ­ನಿ­ಸಿಯಂ, ಸಲ್ಫ­ರ್‌ನ ಅಂಶವು ಇರು­ವುದು ತಿಳಿದು ಬಂದಿದೆ. ಹಾಗೆಯೇ ಸೂಕ್ಷ್ಮ ಪೋಷ­ಕಾಂ­ಶ­ಗ­ಳಾದ ಸತು, ಖಾಫರ್‌, ಆಮ್ಲ, ಮ್ಯಾಂಗ­ನೀಸ್‌, ಕಬ್ಬಣ ಇರು­ತ್ತವೆ. ಇದ­ರಿಂದ ಭೂಮಿಯ ಫಲ­ವ­ತ್ತತೆ ತಾನಾ­ಗಿಯೇ ಹೆಚ್ಚಾ­ಗು­ತ್ತದೆ.

ಹಸಿರು ಗೊಬ್ಬ­ರ­ವಾಗಿ ಸೆಣಬು, ಡಾಯಂಚಾ, ಗಿಲ್ಸಿ­ಡಿಯಾ ಮುಂತಾ­ದ­ವು­ಗ­ಳನ್ನು ಬಳ­ಸು­ತ್ತಾರೆ. ಆದರೆ ಯುಪ­ಟೋ­ರಿಯಂ ಇವೆ­ಲ್ಲ­ಕ್ಕಿಂತ ಮುಂಚೆ ಮಣ್ಣಲ್ಲಿ ಮಣ್ಣಾ­ಗುವ ಗುಣ­ವನ್ನು ಹೊಂದಿದೆ.
ಯುಪ­ಟೋ­ರಿಯಂ ಗುಣಾ­ವ­ಗುಣ: ಪರಿ­ಸರ ಮಾಲಿನ್ಯ ಮಾಡುವ ಗಿಡ ಎಂದು ಯುಪ­ಟೋ­ರಿ­ಯಂನ ಕುಖ್ಯಾತಿ. ಇದಕ್ಕೆ ಕಾರ­ಣವು ಇದೆ. ಎಳೆಯ ಗಿಡ­ವಾ­ಗಿ­ರು­ವಾಗ ಇದನ್ನು ಕಟಾವು ಮಾಡ­ದಿ­ದ್ದರೆ, ಒಂದು ಗಿಡ­ದಿಂದ ಲಕ್ಷಾಂ­ತರ ಬೀಜ­ಗಳು ಉತ್ಪ­ತ್ತಿ­ಯಾ­ಗು­ತ್ತದೆ. ಇದು ಉಣು­ಗು­ಗಳು ಹುಟ್ಟಲು ಕಾರ­ಣ­ವಾ­ಗು­ತ್ತದೆ. ಇಷ್ಟೇ ಅಲ್ಲದೆ, ಅಸ್ತಮಾ ರೋಗ ಸಹ ಇದ­ರಿಂದ ಬರುವ ಸಾಧ್ಯತೆ ಇದೆ. ಅದ­ಕ್ಕಾಗಿ ಇದನ್ನು ಗೊಬ್ಬ­ರ­ವಾಗಿ ಬಳ­ಸಿ­ದರೆ ಪ್ರಯೋ­ಜ­ನಕ್ಕೆ ಬರು­ತ್ತದೆ.

ಕೊಟ್ಟಿ­ಗೆ­ಯಲ್ಲಿ ದನ­ಗ­ಳಿಗೆ ಈ ಯುಪ­ಟೋ­ರಿಯಂ ಗಿಡ­ಗ­ಳನ್ನು ಹಾಸಲು ಉಪ­ಯೋ­ಗಿಸಿ ನಂತರ ಗೊಬ್ಬ­ರ­ಗುಂ­ಡಿಗೆ ಹಾಕಿ­ದರೆ ಪೌಷ್ಠಿ­ಕ­ವಾದ ಗೊಬ್ಬರ ಸಿಗು­ತ್ತದೆ.

"ಯಾ­ವು­ದಕ್ಕೂ ಪ್ರಯೋ­ಜ­ನಕ್ಕೆ ಬಾರದ ಗಿಡ ಎನ್ನುವ ಸ್ಥಿತಿ ಯುಪ­ಟೋ­ರಿ­ಯಂಗೆ ಇದೆ. ಇಂತಹ ಗಿಡ­ದಲ್ಲಿ ಹೆಚ್ಚಿಗೆ ತಾಕತ್ತು ಇದೆ ಎಂದು ಗೊತ್ತಾ­ಗಿದ್ದು ಭತ್ತದ ಗದ್ದೆ­ಯಲ್ಲಿ ಇದನ್ನು ಗೊಬ್ಬ­ರ­ವಾಗಿ ಬಳ­ಸಲು ಆರಂ­ಭಿ­ಸಿ­ದಾಗ. ನಾವು ಇದನ್ನು 12 ವರ್ಷ­ದಿಂದ ಪ್ರಯೋಗ ಮಾಡಿದ ಮೇಲೆ ಇದನ್ನು ಯಾವುದೇ ಅನು­ಮಾ­ನ­ವಿ­ಲ್ಲದೆ ಗೊಬ್ಬ­ರ­ವಾಗಿ ಬಳಸ ಬಹುದು ಎನ್ನುವ ತಿರ್ಮಾ­ನಕ್ಕೆ ಬಂದಿ­ದ್ದೇವೆ. ಸಾವ­ಯವ ಕೃಷಿ ಮಾಡಿ­ದರೆ ಇಳು­ವರಿ ಕಡಿಮೆ ಬರು­ತ್ತದೆ ಎನ್ನು­ತ್ತಾರೆ. ಕಡಿಮೆ ಯಾಗು­ವುದು ಸತ್ಯ. ಆದರೆ ಸತತ ಹತ್ತು ವರ್ಷ ಯುಪ­ಟೋ­ರಿಯಂ ಬಳ­ಸಿ­ದರೆ ಭೂಮಿ ತುಂಬಾ ಫಲ­ವ­ತ್ತಾಗಿ ತಾನಾ­ಗಿಯೇ ಹೆಚ್ಚಿಗೆ ಇಳು­ವರಿ ಬರು­ತ್ತದೆ" ಎನ್ನು­ವು­ದಾಗಿ ಸಂಶೋ­ಧನಾ ಕೇಂದ್ರದ ಡಾ. ಮಂಜಪ್ಪ ಹೇಳು­ತ್ತಾರೆ.

ಬಯೋ ಗ್ಯಾಸ್‌ಗೆ ಕಚ್ಚಾ ವಸ್ತು: ಸಾಮಾ­ನ್ಯ­ವಾಗಿ ಬಯೋ­ಗ್ಯಾಸ್‌ ಉತ್ಪ­ದ­ನೆಗೆ ಸೆಗಣಿ ಬೇಕು. ಕಡಿಮೆ ಜಾನು­ವಾ­ರು­ಗ­ಳನ್ನು ಸಾಕಿ­ಕೊಂ­ಡ­ವ­ರಿಗೆ ಸೆಗ­ಣಿಯ ತೊದರೆ ಇರು­ತ್ತದೆ. ಇಂತ­ವರು ಯುಪ­ಟೋ­ರಿಯಂ ಗಿಡ­ವನ್ನು ಬಳ­ಸ­ಬ­ಹುದು. ಆದರೆ ಇದಕ್ದು ನಿಯ­ಮ­ವಿದೆ. ನಾಲ್ಕು ಭಾಗ ಸೆಗಣಿ, ಒಂದು ಭಾಗ ಯುಪ­ಟೋ­ರಿಯಂ ಸೇರಿ­ಸ­ಬೇಕು. ಹೆಚ್ಚಿಗೆ ಪ್ರಮಾ­ಣದ ಈ ಸಸ್ಯ­ಗ­ಳನ್ನು ಸೆಗ­ಣಿಯ ಜೊತೆಗೆ ಸೇರಿ­ಸಿ­ದರೆ ಬಯೋ­ಗ್ಯಾ­ಸ್‌ನ ಟ್ಯಾಂಕಿನ ಒಳ­ಗಡೆ ಈ ಸಸ್ಯ ಸಿಕ್ಕಿ ಹಾಕಿ­ಕೊ­ಳ್ಳುವ ಸಾಧ್ಯತೆ ಇರು­ತ್ತದೆ. ಯುಪ­ಟೋ­ರಿಯಂ ಅನ್ನು ಗ್ಯಾಸ್‌ಗೆ ಬಳ­ಸು­ವು­ದ­ರಿಂದ ಸುಮಾರು 150 ರಿಂದ 200 ಲೀ ಹೆಚ್ಚಿಗೆ ಗ್ಯಾಸ್‌ ಸಿಗು­ತ್ತದೆ.

ಇದು ನಿಷ್ಪ್ರ­ಯೋ­ಜಕ ಎಂದು ತಿಳಿ­ದಿ­ರುವ ಯುಪ­ಟೋ­ರಿ­ಯಂನ ಉಪ­ಯೋಗ. ರಸ­ಗೊ­ಬ್ಬ­ರ­ಕ್ಕಾಗಿ ಗಲಾಟೆ ಮಾಡುವ ಬದಲು, ನಮ್ಮ ಕಾಲಿಗೆ ಸಿಗುವ ಕಳೆ ಗಿಡ­ಗ­ಳನ್ನು ಬಳಸಿ ಉತ್ತಮ ಗೊಬ್ಬ­ರ­ವನ್ನು ತಯಾ­ರಿ­ಸಿ­ಕೊ­ಳ್ಳ­ಬ­ಹುದು.

ಇದರ ಕುರಿತು ಹೆಚ್ಚಿನ ಮಾಹಿ­ತಿ­ಗಾಗಿ: ಡಾ. ಕೆ. ಮಂಜಪ್ಪ
                                                  ಬೇಸಾಯ ತಜ್ಞರು
                                                  ಕೃಷಿ ಸಂಶೋ­ಧನಾ ಕೇಂದ್ರ
                                                  ಬನ­ವಾಸಿ ರಸ್ತೆ, ಶಿರಸಿ
                                                   ಉತ್ತ­ರ­ಕ­ನ್ನಡ

                                                   9448722648

ಬುಧವಾರ, ಅಕ್ಟೋಬರ್ 20, 2010

ಪೋಷಕಾಂಶಗಳಾಗಿ ಕಳೆಗಳ ಬಳಕೆ

ಎಲ್ಲೆಂದರಲ್ಲಿ ಬೆಳೆಯುವ ಯೂಪೋಟೋರಿಯಂ, ಪಾರ್ಥೇನಿಯಂ ಮತ್ತು ಹೆಸರು ತಗಚೆ ಮತ್ತಿತರ ಕಳೆ ಸಸ್ಯಗಳನ್ನು ಬಳಸಿಕೊಂಡು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದನ್ನು ಮುಸುಕಿನಜೋಳ, ಸೂರ್ಯಕಾಂತಿ ಮತ್ತಿತರ ಬೆಳೆಗಳಿಗೆ ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.
ನಿರಂತರವಾಗಿ ರಸಗೊಬ್ಬರಗಳನ್ನು ಬಳಸುವುದರಿಂದ ಭೂಮಿಯಲ್ಲಿ ಕ್ರಮೇಣ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುತ್ತದೆ. ಜೈವಿಕ ಉಸಿರಾಟ ನಿಧಾನವಾಗಿ ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡು ಬೇರುಗಳಿಗೆ ಒದಗಿಸುವ ಶಕ್ತಿಯನ್ನು ಸಸ್ಯಗಳು ಕಳೆದುಕೊಳ್ಳುತ್ತವೆ. ಅಲ್ಲದೆ ಮಣ್ಣು ತನ್ನ ಮೂಲ ಸ್ವರೂಪ ಮತ್ತು ಸಂರಚನೆಯನ್ನು ಕಳೆದುಕೊಳ್ಳುತ್ತದೆ. ಕ್ಷಾರಗುಣ ಪಡೆದುಕೊಂಡು ನೀರು ಮತ್ತು ಆಮ್ಲಜನಕ ಹಿಡಿದಿಟ್ಟುಕೊಂಡು ಸಸ್ಯಕ್ಕೆ ಅಗತ್ಯವಿರುವಾಗ ಒದಗಿಸುವಲ್ಲಿ ವಿಫಲವಾಗುತ್ತದೆ. ಈ ಎಲ್ಲದರ ಪರಿಣಾಮ ಮುಂದೊಂದು ದಿನ ಶೂನ್ಯ ಇಳುವರಿಗೆ ಕಾರಣವಾಗಬಹುದು.

ಕಳೆಗಳನ್ನು ಪೋಷಕಾಂಶಗಳಾಗಿ ಬಳಸಿ ಭೂಮಿ ಬಂಜೆಯಾಗುವುದನ್ನು ತಡೆಯಲು ಸಾಧ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ದನಕರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಗಣಿ ಮತ್ತು ಗಂಜಳ ಇತ್ಯಾದಿ ಸಾವಯವ ಪೋಷಕಾಂಶಗಳ ಕೊರತೆ ಹೆಚ್ಚಾಗಿದೆ. ಕಳೆಗಳಾದ ಯೂಪೋಟೋರಿಯಂ,ಪಾರ್ಥೇನಿಯಂ ಮತ್ತು ಹೆಸರು
ಯೂಪೋಟೋರಿಯ
ತಗಚೆಗಳು ಪ್ರಮುಖವಾಗಿ ಮಳೆಗಾಲದಲ್ಲಿ ರಸ್ತೆ ಪಕ್ಕದಲ್ಲಿ, ಬೀಳು ಭೂಮಿಯಲ್ಲಿ, ಹೊಲ-ಗದ್ದೆಯಲ್ಲಿನ ಬದುಗಳಲ್ಲಿ, ಗೋಮಾಳದಲ್ಲಿ, ಆಟದ ಮೈದಾನ, ಹಳ್ಳ-ಕೊಳ್ಳ ಇತ್ಯಾದಿ ಸ್ಥಳಗಳಲ್ಲಿ ಬೆಳೆಯುತ್ತವೆ. ಈ ಕಳೆ ಸಸ್ಯಗಳ ಎಲೆಗಳಲ್ಲಿ 2.63ರಷ್ಟು ಸಾರಜನಕ, ಶೇ. 0.45ರಷ್ಟು ರಂಜಕ, 2.05 ರಷ್ಟು ಪೊಟ್ಯಾಷ್ ಅಂಶಗಳಿವೆ. ಇತರೆ ಪೋಷಕಾಂಶಗಳಾದ ಗಂಧಕ,ಸುಣ್ಣ, ಮ್ಯಾಗ್ನಿಸಿಯಂ ಮತ್ತು ಲಘು ಪೋಷಕಾಂಶಗಳಾದ ಸತು, ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರ ಇತ್ಯಾದಿ ಖನಿಜಾಂಶಗಳೂ ಸ್ವಲ್ಪ ಪ್ರಮಾಣದಲ್ಲಿವೆ.
ಈ ಎಲ್ಲಾ ಕಳೆಗಳ ಬೇರಿನಲ್ಲಿ ರಂಜಕ ಕರಗಿಸುವ ಸೂಕ್ಷ್ಮಾಣುಗಳಿವೆ. ಹೆಸರು ತಡಚೆಯ ಬೇರಿನ ಗಂಟುಗಳಲ್ಲಿ ಸಾರಜನಕವನ್ನು ಸಂಗ್ರಹಿಸುವ ಸಾವಿರಾರು ಸೂಕ್ಷ್ಮಾಣುಗಳಿವೆ. ಈ ಬೇರುಗಳನ್ನು ಕಾಂಪೋಸ್ಟ್ ತಯಾರಿಕೆಯಲ್ಲಿ ಬಳಸುವುದರಿಂದ ಈ ಎಲ್ಲಾ ಸಾಕ್ಷ್ಮಾಣುಗಳು ಕಾಂಪೋಸ್ಟ್‌ನಲ್ಲಿ ಪುನಃ ವೃದ್ಧಿಯಾಗಿಬೆಳೆಗಳಿಗೆ ಬಳಕೆಯಾಗುತ್ತವೆ.

ಪಾರ್ಥೇನಿಯಂ
ಈ ಕಳೆಗಳ ಕಳಿತ ಗೊಬ್ಬರದಿಂದ ಮಣ್ಣಿಗೆ ಸಾವಯವ ಇಂಗಾಲ ದೊರಕುವುದರಿಂದ ಜೈವಿಕ ಆರೋಗ್ಯ ವೃದ್ಧಿಗೊಂಡು ಮಣ್ಣಿನ ರಚನೆ ಉತ್ತಮಗೊಳ್ಳುತ್ತದೆ. ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಕಳಿತ ಗೊಬ್ಬರದಿಂದ ಸಾವಯವ ಆಮ್ಲಗಳು ಬಿಡುಗಡೆಯಾಗಿ ಮಣ್ಣಿನ ರಸಸಾರ ಉತ್ತಮಗೊಂಡು ಮುಖ್ಯ ಮತ್ತು ಲಘು ಪೋಷಕಾಂಶಗಳು ಹೆಚ್ಚಾಗಿ ಬೆಳೆಗಳಿಗೆ ಲಭ್ಯವಾಗುತ್ತವೆ.
ಕಳೆ ಗೊಬ್ಬರ ತಯಾರಿಸುವ ವಿಧಾನ: ಮೇಲೆ ತಿಳಿಸಿದ ಕಳೆಗಳನ್ನು ಸಾಧ್ಯವಾದಲ್ಲಿ ಬೇರು ಸಮೇತ ಅಥವಾ ಕುಡುಗೋಲಿನಿಂದ ಬುಡಮಟ್ಟಕ್ಕೆ ಕೊಯ್ದು ತರಬೇಕು. ನಂತರ 2 ರಿಂದ 3 ಇಂಚಿನಷ್ಟು ಸಣ್ಣದಾಗಿ ಕತ್ತರಿಸಬೇಕು. 1ಟನ್ ಹಸಿರೆಲೆ ಕಳೆ ಗೊಬ್ಬರ ತಯಾರಿಸಲು 3.5 ಅಡಿ ಅಗಲ,3.5 ಅಡಿ ಎತ್ತರ ಮತ್ತು 8 ಅಡಿ ಉದ್ದದ ಸ್ಥಳ ಬೇಕಾಗುತ್ತದೆ.

ಕತ್ತರಿಸಿದ ಕಳೆಗಳನ್ನು 15ರಿಂದ 20 ಸೆಂ.ಮೀ ಗಾತ್ರದ ಪದರಿನ ರೀತಿಯಲ್ಲಿ ಕಾಂಪೋಸ್ಟ್ ಗುಂಡಿಯಲ್ಲಿ ಹರಡಬೇಕು ನಂತರ ಶೇ10ರಷ್ಟು ಹಸಿ ಸಗಣಿ ಬಗ್ಗಡವನ್ನು ಕಳೆಗಳ ಮೇಲೆ ಸಿಂಪಡಿಸಬೇಕು (ಪ್ರತಿ 100 ಕೆ.ಜಿ. ಕಳೆಗಳಿಗೆ 10 ಕೆ.ಜಿ. ಹಸಿ ಸಗಣಿ ಬೇಕಾಗುತ್ತದೆ). ಪುನಃ ಕತ್ತರಿಸಿದ ಕಳೆಗಳನ್ನು 15 ರಿಂದ 20 ಸೆಂಗಳಷ್ಟು ಹಾಕಿ ಅದರ ಮೇಲೆ ಮತ್ತು ಸಗಣಿ ಬಗ್ಗಡವನ್ನು ಹಾಕುತ್ತ ಬನ್ನಿ. ಹೀಗೆ ಹಾಕಿದ ಕಳೆಗಳು ಮತ್ತು ಬಗ್ಗಡದ ಗುಡ್ಡೆ ಎತ್ತರ 3.5 ಅಡಿಗಳಿಗೆ ಮಿತಿಗೊಳಿಸಿ.

ಗುಡ್ಡೆಯ ಮೇಲೆ 2 ಸೆಂ.ಮೀ.ನಷ್ಟು ಕೆಂಪು ಮಣ್ಣಿನ ಪದರದಿಂದ ಮುಚ್ಚಿ ಉಗುರು ಬಿಸಿ ನೀರನ್ನು ಸಿಂಪಡಿಸಿ ಮಣ್ಣನ್ನು ತೊಯಿಸಿ. ತದನಂತರ 30, 45 ಮತ್ತು 60ನೇ ದಿನಗಳಲ್ಲಿ ಕಾಂಪೋಸ್ಟ್ ಗುಡ್ಡೆಯನ್ನು ಸಲಿಕೆಯಿಂದ ಎಲ್ಲಾ ಪದರುಗಳು ಚೆನ್ನಾಗಿ ಮಿಶ್ರವಾಗುವಂತೆ ಮಗುಚಿ. ನಂತರ ಮೊದಲಿನಂತೆ ಮತ್ತೆ 2 ಸೆಂ.ಮೀ ಕೆಂಪು ಮಣ್ಣಿನಿಂದ ಮುಚ್ಚಿ ಉಗುರು ಬಿಸಿ ನೀರು ಸಿಂಪಡಿಸಿ. 90ದಿನಗಳ ವೇಳೆಗೆ ಸಂಪೂರ್ಣವಾಗಿ ಕಳಿತ ಕಳೆಗಳ ಸಾವಯವ ಗೊಬ್ಬರ ಸಿದ್ಧವಾಗುತ್ತದೆ.

ಈ ಕಳೆ ಗೊಬ್ಬರವನ್ನು ಮುಸುಕಿನಜೋಳ ಬಿತ್ತನೆ ಮಾಡುವ ಹತ್ತು ದಿನ ಮೊದಲು ಪ್ರತಿ ಎಕರೆಗೆ ನಾಲ್ಕು ಟನ್‌ಗಳಷ್ಟು ಭೂಮಿಗೆ ಸೇರಿಸಿ. ಇದರಿಂದ ಶೇ.35 ರಿಂದ 40 ರಷ್ಟು ಇಳುವರಿ ಹೆಚ್ಚುತ್ತದೆ. ಸೂರ್ಯಕಾಂತಿ ಬೆಳೆಯಲ್ಲಿ ಶೇ 32 ರಿಂದ 35ರಷ್ಟು ಇಳುವರಿ ಹೆಚ್ಚುತ್ತದೆ. ಮಣ್ಣಿನಲ್ಲಿ ಜೈವಿಕ ಇಂಗಾಲ ವೃದ್ಧಿಯಾಗುತ್ತದೆ. ಪೋಷಕಾಂಶಗಳ ಪ್ರಮಾಣ ಹೆಚ್ಚುತ್ತದೆ. ಜೈವಿಕ ಗುಣಧರ್ಮಗಳೂ ಹೆಚ್ಚಾಗುವುದು ಕಂಡುಬಂದಿದೆ.
ಈ ಕಳೆಗಳನ್ನು ಮೇಲೆ ತಿಳಿಸಿದಂತೆ ಚೆನ್ನಾಗಿ ಕಳಿಸಿದ ನಂತರ ಸಾವಯವ ಗೊಬ್ಬರವನ್ನಾಗಿ ಬಳಸುವುದರಿಂದ ಈ ಕಳೆ ಸಸ್ಯಗಳ ಬೀಜಗಳ ಪ್ರಸಾರ ತಡೆಯಬಹುದು. ಈ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗುವುದು ತಪ್ಪುತ್ತದೆ.

ಕಳೆ ಸಸ್ಯಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಬಗ್ಗೆ ಇನ್ನಷ್ಟು ಮಾಹಿತಿಗಳು ಬೇಕಿದ್ದರೆ ಕಳೆ ನಿರ್ವಹಣ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು ಅಥವಾ ಬೇಸಾಯಶಾಸ್ತ್ರ ವಿಭಾಗ, ಮಂಡ್ಯದ ವಿ.ಸಿ. ಫಾರಂನ ಕೃಷಿ ಮಹಾ ವಿದ್ಯಾಲಯವನ್ನು ಸಂಪರ್ಕಿಸಬಹುದು. ದೂರವಾಣಿ ನಂಬರ್: 080-23515944/ 08232-277211 (ಎಕ್ಸ್-209)

ಶುಕ್ರವಾರ, ಅಕ್ಟೋಬರ್ 15, 2010

ಅದ್ಭುತ ಸಸ್ಯ ಕಹಿ ಬೇವು

ಕಹಿ ಬೇವು ಒಂದು ಉತ್ತಮ ಬಹುಪಯೋಗಿ, ಪರಿಸರಪ್ರೇಮಿ ವೃಕ್ಷ. ರೈತರು ಇದನ್ನು ಬೆಳೆಸಿ ಲಾಭ ಪಡೆಯಬಹುದಾಗಿದೆ.
ಕಹಿ ಬೇವು ಉಷ್ಣ ಪ್ರದೇಶದ ಸದಾ ಹಸಿರಾಗಿರುವ ಸಸ್ಯ ಪ್ರಭೇದ. ಮೂಲತಃ ಭಾರತ ಉಪಖಂಡಕ್ಕೆ ಸೇರಿದ್ದು. ಆದರೆ ಜಗತ್ತಿನ ಇತರ ಭಾಗಗಳಲ್ಲೂ ಬೆಳೆಯಬಲ್ಲದು.

ಫಲವತ್ತಾದ ಜಮೀನಿನಲ್ಲಿ ಕ್ಷಿಪ್ರಗತಿಯಲ್ಲಿ ಸೊಂಪಾಗಿ ಬೆಳೆಯುವ ಈ ಮರ ಬಂಜರು ಭೂಮಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲೂ ಬೆಳೆಯುತ್ತದೆ. ಸರಾಸರಿ ಎತ್ತರ 15 ರಿಂದ 50 ಅಡಿ. ಜೀವಿತಾವಧಿ ಸುಮಾರು 150 ರಿಂದ 200 ವರ್ಷ. ತಾಯಿ ಬೇರು ಬಲವಾಗಿರುವುದರಿಂದ ಭೂಮಿಯ ಗಟ್ಟಿ ಪದರವನ್ನು ಸಡಿಲಗೊಳಿಸಿ ಆಳದಲ್ಲಿರುವ ಪೋಶಕಾಂಶಗಳನ್ನು ಹೀರಿ ಹುಲುಸಾಗಿ ಬೆಳೆಯಬಲ್ಲದು. ಆದರೆ ಎಳೆಯ ಸಸಿಗಳು ನೆರಳಿನಲ್ಲಿ ಚೆನ್ನಾಗಿ ಬೆಳೆಯಲಾರವು.

ಕಹಿ ಬೇವಿನ ಬೀಜಗಳಿಂದ ಸಸಿಗಳನ್ನು ತಯಾರಿಸಬಹುದು. ನೆಟ್ಟ ಮೊದಲ ವರ್ಷ ಇವುಗಳ ಬೆಳವಣಿಗೆ ನಿಧಾನ ಗತಿಯಲ್ಲಿರುತ್ತದೆ. ನಂತರದ ವರ್ಷಗಳಲ್ಲಿ ತ್ವರಿತಗೊಳ್ಳುತ್ತದೆ. ನೀರು ನಿಲ್ಲುವ ಜಮೀನಿನಲ್ಲಿ ಇವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಬೇವಿನ ಮರಗಳನ್ನು ಜಮೀನಿನ ಅಂಚಿನಲ್ಲಿ ಅಥವಾ ಹೊಲದ ಮಧ್ಯದಲ್ಲಿ ಸಾಲಾಗಿ ನೆಡಬಹುದಾಗಿದೆ. ವಾಸದ ಮನೆಯ ಹಿಂದೆ ಅಥವಾ ಮುಂದುಗಡೆ ಸಹ ಬೆಳೆಸಬಹುದು.

ಬೇವಿನ ಮರಗಳ ನೆಡುತೋಪನ್ನು ಪ್ರತ್ಯೇಕವಾಗಿ ಮಾಡಬೇಕಾದರೆ ಆ ಸ್ಥಳವನ್ನು ಸ್ವಚ್ಛಗೊಳಿಸಿ ಅನುಕೂಲ­ವಾದ ಅಂತರದಲ್ಲಿ (5ಮೀ+ 5ಮೀ ಅಥವಾ 8ಮೀ+8ಮೀ) 0.5 ಘನ ಮೀಟರ್ ಗುಂಡಿಗಳನ್ನು ತೋಡಬೇಕು. ಅದರಲ್ಲಿ ಉತ್ತಮ ಸಸಿಗಳನ್ನು ನೆಟ್ಟು ಆರೈಕೆ ಮಾಡಬೇಕು. ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕನಿಷ್ಠ 3 ರಿಂದ 4 ಬೇವಿನ ಮರ ಬೆಳೆಸಿದಲ್ಲಿ ಅಂದಾಜು 2000 ರೂಪಾಯಿ ಆದಾಯ ಗಳಿಸಬಹುದಾಗಿದೆ.

ಪ್ರಾಮುಖ್ಯತೆ: ಕಹಿ ಬೇವಿನ ಮರದ ಎಲೆ, ಕಾಂಡ, ಬೇರು, ಹೂವು ಮತ್ತು ಬೀಜಗಳನ್ನು ಔಷಧವಾಗಿ ಉಪಯೋಗಿಸುತ್ತಿದ್ದ ಬಗ್ಗೆ 4500 ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಶತಮಾನಗಳ ಹಿಂದೆಯೇ ಗ್ರಾಮೀಣ ಔಷಧಾಲಯಗಳೆಂದು ಈ ಮರಗಳನ್ನು ಕರೆಯಲಾಗುತ್ತಿತ್ತು. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ತಜ್ಞರು ಉಪಯುಕ್ತವಾದ ಗಿಡಮರಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ಕಹಿ ಬೇವನ್ನು ಗ್ರಾಮೀಣ ಜನರು ತಮ್ಮ ಜಮೀನಿನ ಅಕ್ಕಪಕ್ಕಗಳಲ್ಲಿ, ಶಾಲಾ ಆವರಣಗಳಲ್ಲಿ, ರಸ್ತೆಗಳ ಎರಡೂ ಪಕ್ಕಗಳಲ್ಲಿ ಬೆಳೆಸುತ್ತಿರುವುದನ್ನು ಗಮನಿಸಿದ್ದರು. ನಂತರ ಆಳವಾಗಿ ಅಧ್ಯಯನ ಮಾಡಿ ಅದರ ಅದ್ಭುತ ಉಪಯುಕ್ತ ಮಾಹಿತಿಗಳನ್ನು ಜಗತ್ತಿಗೆ ತಿಳಿಸಿದ ಮೇಲೆ ಇದಕ್ಕೆ ಇನ್ನಷ್ಟು ಮಹತ್ವ ಬಂತು.

ಎಲ್ಲಾ ಗಿಡಮರಗಳ ಪೈಕಿ ಕಹಿಬೇವಿನ ಮರವು ಮಾನವ ಜನಾಂಗದ ಅತ್ಯುತ್ತಮ ಬಹುಪಯೋಗಿ ಸದಾ ಹಸಿರಾಗಿರುವ ಆರೋಗ್ಯಕರ ಮರ. ಕಹಿ ಬೇವಿನ ಮರಗಳು ಹೆಚ್ಚು ಆಮ್ಲಜನಕವನ್ನು ವಾತಾವರಣದಲ್ಲಿ ಬಿಡುಗಡೆ ಮಾಡುವ ಗುಣಗಳನ್ನು ಹೊಂದಿದ್ದು ವಾಯುಮಾಲಿನ್ಯ ನಿಯಂತ್ರಣದಲ್ಲಿ ಇಡಲು ಸಹಕಾರಿ.

ಕಹಿ ಬೇವಿನ ಬಗ್ಗೆ ಎರಡು ದಶಕಗಳಿಂದ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸಾವಯವ ಗೊಬ್ಬರ, ಕೀಟನಾಶಕ, ಶಿಲೀಂದ್ರನಾಶಕ, ಔಷಧ ಹಾಗೂ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಅದು ನಾನಾ ರೂಪದಲ್ಲಿ ಪ್ರಯೋಜನಕಾರಿ. ಇದರಿಂದ ಬಡ ಮತ್ತು ಶ್ರೀಮಂತ ರಾಷ್ಟ್ರಗಳು ಪ್ರಯೋಜನಗಳನ್ನು ಪಡೆಯುತ್ತಿದೆ. ಆದುದರಿಂದ ಕಹಿ ಬೇವು ಒಂದು ಅದ್ಭುತ ಗಿಡ.

ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯತ್ತ ಹೆಚ್ಚು ಗಮನ ಹರಿಸಿರುವ ರೈತರು ಕಹಿ ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿ­ಸುತ್ತಿದ್ದಾರೆ. ಕಹಿ ಬೇವಿನ ಹಿಂಡಿಯಲ್ಲಿ ಸಾರಜನಕ, ರಂಜಕ, ಪೊಟ್ಯಾಶ್, ಇಂಗಾಲ, ಸಲ್ಪರ್, ಕ್ಯಾಲ್ಸಿಯಂ, ಮೆಗ್ನೇಶಿಯಂ ಮುಂತಾದ ಪೋಷಕಾಂಶಗಳಿವೆ. ಬೇವಿನ ಎಣ್ಣೆಯನ್ನು ಕೀಟನಾಶಕವಾಗಿ, ಶಿಲೀಂದ್ರನಾಶಕವಾಗಿ ಬಳಸುತ್ತಿದ್ದಾರೆ. ಬೇವಿನ ಎಣ್ಣೆಯಿಂದ ತಯಾರಿಸಿದ ಕೀಟನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯ.
ಇವುಗಳು ಕೆಲವು ಬೆಳೆಗಳ ಕೀಟಗಳನ್ನು ನಿಯಂತ್ರಿಸುತ್ತವೆ. ಅಷ್ಟೇ ಅಲ್ಲದೆ ಪರಿಸರಪ್ರೇಮಿ. ಕಹಿಬೇವಿನ ಎಣ್ಣೆಯನ್ನು ಸೊಳ್ಳೆ ನಿವಾರಕವಾಗಿ ಬಳಸಬಹುದಾಗಿದೆ.

ಮಾರುಕಟ್ಟೆಯಲ್ಲಿ ಕಹಿಬೇವಿನ ಸಾಬೂನು, ಶಾಂಪೂ, ಟೂತ್‌ಪೇಸ್ಟ್, ಟೂತ್‌ಪೌಡರ್, ಕೀಟನಾಶಕ, ಶಿಲೀಂದ್ರ­­ನಾಶಕ, ಕ್ರೀಮ್ ಇತ್ಯಾದಿಲಭ್ಯ.

ಮಂಗಳವಾರ, ಅಕ್ಟೋಬರ್ 12, 2010

ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ

ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
ಭಾರತದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರವಾಗಿ ಅಮೆರಿಕಾದ ಎಸ್೨ಸಿ ಗ್ಲೋಬಲ್ ಸಿಸ್ಟಮ್ಸ್ ಎಂಬ ಸಂಸ್ಥೆಯು ಅಲಾಸ್ಕಾದಿಂದ ಪರಿಶುದ್ಧ ನೀರನ್ನು ಕಾರ್ಗೋ ಹಡಗುಗಳ ಮೂಲಕ ತಂದು ಮಾರಲು ನಿರ್ಧರಿಸಿದೆ. ಮುಂದಿನ ಆರೆಂಟು ತಿಂಗಳಲ್ಲೇ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟಿಸಿದೆ. ಆದರೆ ಈ ಸಂಸ್ಥೆಯ ಹಣಕಾಸಿನ ಸಾಮರ್ಥ್ಯ, ಅಲಾಸ್ಕಾದಿಂದ ನೀರೆತ್ತುವುದರಲ್ಲಿ ಇರುವ ಸಮಸ್ಯೆಗಳು, ಭಾರತದ ನೀರಿನ ಅಗತ್ಯ - ಇವನ್ನೆಲ್ಲ ಗಮನಿಸಿದರೆ ಇದೊಂದು ಅಪ್ಪಟ ಕಮರ್ಶಿಯಲ್ ಕನಸೇ ಹೊರತು ಯಾವುದೇ ಸಾಮಾಜಿಕ ಉದ್ದೇಶವೂ ಇದರಲ್ಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವಿಶೇಷವೆಂದರೆ ಅಲಾಸ್ಕಾದ ಸಿಟ್ಕಾ ನಗರದ ಬಳಿ ಇರುವ ಬ್ಲೂ ಲೇಕ್ ಸರೋವರದಿಂದ ಸಂಗ್ರಹವಾಗಿ ಶಾಂತಸಾಗರವನ್ನು ದಾಟಿ ಬರುವ ನೀರನ್ನು ಭಾರತದ ಪಶ್ಚಿಮ ತಟದ ಮುಂಬಯಿ, ಜವಹರಲಾಲ್ ನೆಹರು, ಮರ್ಮಗೋವಾ ಮತ್ತು ನವಮಂಗಳೂರು ಬಂದರುಗಳಲ್ಲಿ ಸಂಗ್ರಹಿಸಲಾಗುವುದು. ಅಲಾಸ್ಕಾದಲ್ಲಿ ೧೨.೫ ಪೈಸೆಗೆ ಲೀಟರಿನಂತೆ ದಿನಾಲೂ ೮೦ ಲಕ್ಷ ಗ್ಯಾಲನ್‌ನಷ್ಟು ನೀರನ್ನು ಖರೀದಿಸುವ ಎಸ್೨ಸಿ ಸಂಸ್ಥೆಯು ಭಾರತದಲ್ಲಿ ಇದೇ ನೀರನ್ನು ರೂ. ೧೨.೬೯ ಪೈಸೆಗೆ ಲೀಟರಿನಂತೆ ಮಆರಾಟ ಮಾಡಿ ಲಾಭ ಗಳಿಸುವುದಂತೆ. ಅಷ್ಟೇ ಅಲ್ಲ, ಭಾರತವನ್ನೇ ವಿಶ್ವ ಜಲಕೇಂದ್ರವನ್ನಾಗಿ ಮಾಡಿಕೊಂಡು ಇಲ್ಲಿಂದಲೇ ಅರಬ್ ಮತ್ತು ಆಫ್ರಿಕಾದ ದೇಶಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಎಲ್ಲಾ ದೇಶಗಳಿಗೂ ಭಾರತದಿಂದ ನಾಲ್ಕೇ ದಿನಗಳಲ್ಲಿ ನೀರು ಕಳಿಸಬಹುದು ಎಂಬುದೇ ಇಲ್ಲಿನ ಹೆಚ್ಚುಗಾರಿಕೆ.
ಈ ಸುದ್ದಿಯನ್ನು ಗಾರ್ಡಿಯನ್ ಪತ್ರಿಕೆಯು ಪ್ರಕಟಿಸಿದಾಗಿನಿಂದ ಎಲ್ಲೆಡೆ ಈ ಯೋಜನೆ ಸಾಧ್ಯವೇ, ಸಾಧುವೆ? ಎಂಬ ಚರ್ಚೆ ಆರಂಭವಾಗಿದೆ. ಹಾಗಾದರೆ ಈ ಎಸ್೨ಸಿ ಸಂಸ್ಥೆಗೆ ಈ ವಿಷಯದಲ್ಲಿ ಇರುವ ತಜ್ಞತೆಯೇನು? ಭಾರತಕ್ಕೆ ನಿಜಕ್ಕೂ ಅಲಾಸ್ಕಾದಿಂದ ನೀರು ತರಬೇಕಾದ ಅಗತ್ಯವಿದೆಯೆ? ಇಂಥ ಯೋಜನೆಗಳು ಹಿಂದೆಯೂ ಇದ್ದಿರಲಿಲ್ಲವೆ? ಅವೆಲ್ಲ ವಿಫಲವಾಗಲು ಕಾರಣವೇನು? ನೀರಿನ ಖಾಸಗೀಕರಣದ ಈ ಹೊಸ ವ್ಯಾಪಾರವನ್ನು ಭಾರತ ಸರ್ಕಾರವು ಕೂಡಲೇ ನಿಲ್ಲಿಸದಿದ್ದರೆ ಜಾಗತೀಕರಣದ ಹೆಸರಿನಲ್ಲಿ ಕುಡಿಯುವ ನೀರನ್ನೂ ಬಡವರ ಕೈಗೆ ಸಿಗದಂತೆ ಮಾಡುವ ಯತ್ನಕ್ಕೆ ಮೇಲುಗೈ ಆಗಬಹುದು.
ಭಾರತದಲ್ಲಿ ನೀರಿನ ಸಮಸ್ಯೆಯು ಭೀಕರವಾಗಿದೆ ಎಂದು ಎರಡು ವರದಿಗಳು ಹೇಳಿದ್ದನ್ನೇ ಎಸ್೨ಸಿಯಂಥ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಮೊದಲನೆಯ ವರದಿಯನ್ನು ಜೆಪಿ ಮೋರ್ಗನ್ ಸಂಸ್ಥೆ ತಯಾರಿಸಿದ್ದರೆ, ಎರಡನೆಯ ವರದಿಯನ್ನು ಗ್ರೈಲ್ ರಿಪೋರ್ಟ್ ಸಂಸ್ಥೆಯು ರೂಪಿಸಿದೆ. ಎರಡೂ ವರದಿಗಳಲ್ಲಿ ಭಾರತದ ನೀರಿನ ಪರಿಸ್ಥಿತಿಯನ್ನು ಅಧಿಕೃತವಾಗೇ ಅಧ್ಯಯನ ಮಾಡಿರುವುದೂ ಕಂಡುಬರುತ್ತದೆ. ಈ ವರದಿಗಳ ಅಂಕಿ ಅಂಶಗಳನ್ನು ಖಚಿತವಾಗಿ ಪರಿಶೀಲಿಸಲು ನನಗೆ ಸಾಧ್ಯವಾಗಿಲ್ಲ. ಆದರೆ, ಭಾರತದ ನೀರಿನ ಸಮಸ್ಯೆ ಭೀಕರವಾಗಿಲ್ಲದಿದ್ದರೂ ಗಂಭೀರವಾಗಿದೆ ಎನ್ನುವುದಂತೂ ನಿಜ. ಇದಕ್ಕೆ ನೀರಿನ ಕೊರತೆ ಕಾರಣವಲ್ಲ, ಬದಲಿಗೆ ನೀರಿನ ಬಳಕೆಯ ಅಸಮರ್ಪಕ ಅವೈಜ್ಞಾನಿಕ ನಿರ್ವಹಣೆಯೇ ಕಾರಣ ಎಂಬುದೂ ಅಷ್ಟೇ ನಿಜ. ಕಾವೇರಿಯಿಂದ ಕುಡಿಯುವ ನೀರು ತರಿಸಿಕೊಂಡು ತಮ್ಮ ಕಾರಿನಿಂದ ಹಿಡಿದು ತಿಕದವರೆಗೆ ಎಲ್ಲವನ್ನೂ ಆ ನೀರಿನಲ್ಲೇ ತೊಳೆಯುವ ಬೆಂಗಳೂರಿನ ನನ್ನಂಥ ಲಕ್ಷಾಂತರ ಜನರೇ ಇದಕ್ಕೆ ಒಂದು ನಿದರ್ಶನ.

ಈಗ ಈ ಸುದ್ದಿಯನ್ನು ಎಳೆ ಎಳೆಯಾಗಿ ಬಿಡಿಸಿ ನೋಡಬೇಕಿದೆ. ಆದ್ದರಿಂದಲೇ ತುಸು ಉದ್ದವಾದ ಈ ಬ್ಲಾಗನ್ನು ನೀವೆಲ್ಲ ಸಂಯಮದಿಂದ ಓದಬೇಕು. ಸಮಸ್ಯೆಯನ್ನು ಬುಡದಿಂದ ಅರ್ಥ ಮಾಡಿಕೊಳ್ಳದೇ ಪರಿಹಾರ ಹುಡುಕುವುದರಲ್ಲಿ ಅರ್ಥವಿಲ್ಲ.
ಮೊದಲು ಗಾರ್ಡಿಯನ್ ಪತ್ರಿಕೆಯು ವರದಿ ಮಾಡಿದ್ದರಲ್ಲಿ ಏನೇನು ವಿಷಯಗಳಿವೆ ಅನ್ನೋದನ್ನು ತಿಳಿದುಕೊಳ್ಳೋಣ:
ಹೀಗೆ ನೀರು ತರುವಲ್ಲಿ ಡೀಸೆಲ್ ಖರ್ಚೇ ನಿಮ್ಮ ಕಂಪೆನಿಯನ್ನು ತಿಂದು ಹಾಕುತ್ತದೆ ಎನ್ನುತ್ತಾರೆ ಆಂತಾರಾಷ್ಟ್ರೀಯ ಜಲತಜ್ಞ ಪೀಟರ್ ಗ್ಲೀಕ್. ಹಾಗಂತ ಇಂಥ ಯತ್ನಗಳು ಹಿಂದೆಯೂ ನಡೆದಿವೆ. ೧೯೯೭ರಲ್ಲೇ ೧೩ ಮೈಲು ದೂರದ ಈಜಿನಾ ದ್ವೀಪಕ್ಕೆ ಗ್ರೀಸ್ ದೇಶವು ನೀರನ್ನು ಹಡಗಿನಲ್ಲಿ ಸರಬರಾಜು ಮಾಡಿತ್ತು. ಸಿಂಗಾಪುರವು ಸದ್ಯ ಮಲೇಶ್ಯಾದಿಂದಲೇ ಶುದ್ಧ ನೀರನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಖ್ಯವಾಗಿ ಅರಬ್ ದೇಶಗಳು ಡಿಸ್ಯಾಲಿನೇಶನ್ ಸ್ಥಾವರಗಳನ್ನು ಇಟ್ಟುಕೊಂಡು ಉಪ್ಪುನೀರನ್ನೇ ಶುದ್ಧೀಕರಿಸಿಕೊಂಡು ಬಳಸುತ್ತಿವೆ. ಈ ನೀರು ಅಲಾಸ್ಕಾದ ನೀರಿಗಿಂತ ೧೮ ಪಟ್ಟು ಅಗ್ಗವಂತೆ. ಸೌದಿ ಅರೇಬಿಯಾ ಮತ್ತು ಕುವೈತ್‌ಗಳಲ್ಲಿ ಇಂಥ ಸ್ಥಾವರಗಳೇ ಅಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಿವೆ. ಈ ಮಧ್ಯೆ ಕೆನಡಾ ದೇಶವು ನೀರಿನ ರಫ್ತನ್ನು ನಿಷೇಧಿಸಲು ಚಿಂತನೆ ನಡೆಸಿದೆ.
ಗಾರ್ಡಿಯನ್ ವರದಿ ಹಾಗಿರಲಿ, ಎಸ್೨ಸಿ ಏನು ಹೇಳುತ್ತೆ? (ಗೊತ್ತಿರಲಿ, ಎಸ್೨ಸಿ ಎಂದರೆ ಸೋಸ್ ಟು ಕನ್ಸೂಮರ್ ಎಂದರ್ಥ) ಅಲಾಸ್ಕಾ ರಿಸೋರ್ಸ್ ಮ್ಯಾನೇಜ್‌ಮೆಂಟ್ (ಎ ಆರ್ ಎಂ) ಸಂಸ್ಥೆಯಲ್ಲಿ ಶೇ ೫೦ರಷ್ಟು ಒಡೆತನವನ್ನು ಹೊಂದಿರುವ ತಾನು ಎಲ್ಲಾ ವಿಧಾನಗಳಲ್ಲಿ, ಎಲ್ಲ ಬಗೆಯ ಗಾತ್ರದಲ್ಲಿ ನೀರು ಸರಬರಾಜು ಮಾಡಬಹುದು ಎನ್ನುತ್ತದೆ.

ಎಸ್೨ಸಿ ಸಂಸ್ಥೆಯ ಮುಖ್ಯಸ್ಥರು ಯಾರು? ಅಲೆಜಾಂಡ್ರೋ ಬಾಟಿಸ್ಟಾ ಎಂಬ ೫೩ ವರ್ಷ ವಯಸ್ಸಿನ ಮೆಕ್ಸಿಕನ್ ರಿಯಲ್ ಎಸ್ಟೇಟ್ ಉದ್ಯಮಿ ಈ ಸಂಸ್ಥೆಯ ಅಧ್ಯಕ್ಷ. ಈತನ ಒಟ್ಟು ಸಿರಿವಂತಿಕೆ ೨.೪೮ ಲಕ್ಷ ಡಾಲರ್‌ಗಳು ಎಂದು ಫೋರ್ಬಿಸ್ ವೆಬ್‌ಸೈಟ್ ಉಸುರುತ್ತದೆ. ಹಾಗೇ ಎಸ್೨ಸಿ ಸಂಸ್ಥೆಯಲ್ಲಿ ನಿರ್ದೇಶಕ ಮತ್ತು ಕೆನಡಾ - ಅಮೆರಿಕಾ ಸಂಸ್ಥೆಗಳ ಅಧ್ಯಕ್ಷ. ಜೋಸೆಫ್ ಡಿಕ್ಸನ್ ಎಂಬಾತ ಸಂಸ್ಥೆಯ ಹಣಕಾಸು ಅಧಿಕಾರಿ. ಈತನ ಒಟ್ಟು ಸಿರಿವಂತಿಕೆ ೫೪ ಸಾವಿರ ಡಾಲರ್‌ಗಳು. ಟೀನಾ ವ್ಯಾಂಡರ್‌ಹೇಡೆನ್ ಎಂಬಾಕೆ ಈ ಸಂಸ್ಥೆಯ ನಿರ್ದೇಶಕಿ; ಈಕೆಯ ಕೆಲಸ ಮಾರ್ಕೆಟಿಂಗ್, ಹೂಡಿಕೆ ಸಂಗ್ರಹ. ಇನ್ನೊಬ್ಬ ನಿರ್ದೇಶಕ ಮಾರ್ಕ್ ಲೆಂಬರ್ಟ್. ನೀರಿನ ಸಾಗಣೆ ವಿಷಯದಲ್ಲಿ ಅನುಭವ ಇರುವ ಏಕೈಕ ಅಧಿಕಾರಿ ಎನ್ನಬಹುದು.
ಎಸ್೨ಸಿ ಸಂಸ್ಥೆಯ ಸ್ವಯಂ ಹೇಳಿಕೆ ಇಲ್ಲಿದೆ:
ಈ ಸಂಸ್ಥೆಯು ಅಮೆರಿಕಾ ಸರ್ಕಾರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಯೋಜನೆಯ ಕುರಿತು ಇರುವ ರಿಸ್ಕ್‌ಗಳನ್ನು ಹೀಗೆ ಪಟ್ಟಿ ಮಾಡಿದೆ: ನಮ್ಮದು ಹೊಸ ವ್ಯವಹಾರ. ಇದರಲ್ಲಿ ನಮ್ಮ ತಂಡಕ್ಕೆ ಇರುವ ಅನುಭವ ಕಡಿಮೆ. ಆದ್ದರಿಂದ ನಮ್ಮಲ್ಲಿ ಹಣ ಹೂಡುವುದು ಒಂದು ತಾಪತ್ರಯದ ವಿಚಾರವೇ ಹೌದು. ನಾವು ಈವರೆಗೆ ಯಾವುದೇ ಕಾರ್ಯಾಚರಣೆಯನ್ನೂ ಮಾಡಿಲ್ಲ. ಜಲಸಾಗಣೆ ಬಗ್ಗೆ ಕೇವಲ ಪ್ರಯೋಗ ಮಾಡಿದ್ದೇವೆ ಅಷ್ಟೆ. ನಮ್ಮ ಯೋಜನೆಯ ಆರ್ಥಿಕ ವಯಬಿಲಿಟಿಯೇ ಸಂಶಯಾಸ್ಪದವಾಗಿದೆ. ಅಕಸ್ಮಾತ್ ನಾವು ಜಲಸಾಗಣೆ ವ್ಯವಸ್ಥೆಯನ್ನು ಸ್ಥಾಪಿಸದೇ ಇದ್ದರೆ ನಮಗೆ ಬೇರೆ ಆದಾಯವೇ ಇರುವುದಿಲ್ಲ. ನಮ್ಮ ವ್ಯವಹಾರ ಮುಂದುವರಿಸಲು ನಮಗೆ ಇನ್ನೂ ಬಂಡವಾಳ ಬೇಕಿದೆ. ಬಂಡವಾಳದ ಕೊರತೆಯಿಂದ ಪ್ರಸ್ತುತ ನಾವು ಯಾವುದೇ ಹೊಸ ಸಾಧನ ಖರೀದಿ ಒಪ್ಪಂದವನ್ನೂ ಹೊಂದಿಲ್ಲ. ಅದೂ ಅಲ್ಲದೆ ನಾವು ನೀರು ಮಾರಾಟದ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಗುರಿಯಾದರೆ ಹೂಡಿಕೆದಾರರಾದ ನಿಮ್ಮ ಎಲ್ಲ ಹಣವೂ ಕಳೆದುಹೋಗುತ್ತದೆ. ಇದಲ್ಲದೆ ನಾವು ಪೆನ್ನಿಸ್ಟಾಕ್ ನಿಯಮಗಳ ಅಡಿಯಲ್ಲಿ ಬರೋದ್ರಿಂದ ನಮ್ಮ ದಾಸ್ತಾನನ್ನು ಮರುಮಾರಾಟ ಮಾಡುವುದಕ್ಕೆ ನಿರ್ಬಂಧಗಳಿವೆ.

(ಪೆನ್ನಿ ಸ್ಟಾಕ್ ಅಂದ್ರೆ: ನಾಸ್‌ಡಾಕ್ - ಅಮೆರಿಕಾದ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟೀಕರಣವಾಗಿರಲ್ಲ; ಅದರ ಶೇರು ಬೆಲೆ ೫ ಡಾಲರ್‌ಗಿಂತ ಕಡಿಮೆಯಾಗಿರುತ್ತೆ; ೫೦ ಲಕ್ಷ ಡಾಲರ್‌ಗಿಂತ ಕಡಿಮೆ ಆಸ್ತಿಯನ್ನು ಹೊಂದಿದ ಕಂಪೆನಿಯಾಗಿರುತ್ತೆ. ಅಲ್ಲದೆ ಅದು ನಾಸ್‌ಡಾಕ್‌ನ ಪಿಂಕ್‌ಶೀಟ್‌ನಲ್ಲಿ ಅಥವಾ ಓವರ್ ದಿ ಕೌಂಟರ್ ಬುಲೆಟಿನ್ ಬೋರ್ಡ್‌ನಲ್ಲಿ ಪಟ್ಟಿಯಾಗಿರುತ್ತೆ. ಅಂದಮೇಲೆ ಗೊತ್ತಾಯಿತಲ್ಲ, ಎಸ್೨ಸಿ ಸಂಸ್ಥೆಯ ಆರ್ಥಿಕ ಸಾಮರ್ಥ್ಯ ಏನೆಂದು…)
ನಷ್ಟದ ಕಂಪೆನಿ
ಎಸ್೨ಸಿ ಸಂಸ್ಥೆಯು ಸಲ್ಲಿಸಿದ ಅಧಿಕೃತ ವಾರ್ಷಿಕ ಹಣಕಾಸು ದಾಖಲೆಗಳ ಪ್ರಕಾರ ಸಂಸ್ಥೆಯ ೨೦೧೦ರ ಜೂನ್ ೩೦ಕ್ಕೆ ಕೊನೆಗೊಂಡಂತೆ ಅಕ್ಯುಮುಲೇಟೆಡ್ ನಷ್ಟ ೫೫.೨೭ ಲಕ್ಷ ಡಾಲರ್‌ಗಳು. ಜೂನ್೩೦ಕ್ಕೆ ಕೊನೆಗೊಂಡಂತೆ ಮೂರು ತಿಂಗಳ ನಷ್ಟವೇ ೨.೪೮ ಲಕ್ಷ ಡಾಲರ್‌ಗಳು. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು ೪೬ ಸಾವಿರ ಡಾಲರ್ ನಷ್ಟ ಅನುಭವಿಸಿತ್ತಂತೆ. ಸಂಸ್ಥೆಯ ಖರ್ಚುಗಳು ಆರು ತಿಂಗಳಲ್ಲಿ ೧.೮೨ ಲಕ್ಷ ಡಾಲರ್‌ಗಳು. ಈ ಆರು ತಿಂಗಳಲ್ಲಿ ಸಂಥೆಯು ಬಳಸಿದ ನಗದು ಹಣ ೧.೨೨ ಲಕ್ಷ ಡಾಲರ್‌ಗಳು.

ಇದೇ ವರದಿಯಲ್ಲಿ ಎಸ್೨ಸಿ ಸಂಸ್ಥೆಯು ಇರಾಖಿನ ಖಾಸಗಿ ಪಾರ್ಟಿಗಳ ಜೊತೆ ಒಪ್ಪಂದ ಮಾತುಕತೆ ನಡೆಸಿರುವುದಾಗಿಯೂ, ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಈಗಾಗಲೇ ಸಾಗಣೆ ಜಾಲ ಹೊಂದಿರುವ ಕಂಪೆನಿಗಳ ಜೊತೆ ಮಾತುಕತೆ ಶುರು ಮಾಡಿರುವುದಾಗಿಯೂ ತಿಳಿಸಿದೆ. ಮಾರ್ಕೆಟ್ ಕಾರ್ಯಗಳಿಗಾಗಿ ಶಹೀದ್ ವೋಹ್ರಾ ಮತ್ತು ರಾಡ್ ಬಾರ್ಲೆಟ್ ಎಂಬುವವರನ್ನು ಸಂಸ್ಥೆಯು ನೇಮಿಸಿಕೊಂಡಿದೆ. ಶಾಹಿದ್‌ಗೆ ಹಡಗು ಉದ್ಯಮದಲ್ಲಿ ಅನುಭವವಿದೆ.
ಇಷ್ಟೆಲ್ಲ ಮಾಹಿತಿಯನ್ನು ಬದಿಗಿಟ್ಟು, ಎಸ್೨ಸಿ ಸಂಸ್ಥೆಯು ಈಗ ಏನೇನು ಸಾಧಿಸಿದೆ ಅನ್ನೋದನ್ನು ನೋಡೋಣ: ಸಿಟ್ಕಾ ನಗರದಲ್ಲಿ ನೀರು ಸಾಗಣೆಗೆ ಬೇಕಾದ ವ್ಯವಸ್ಥೆಯನ್ನು ನಿರ್ಮಿಸಲು ಅದು ಇನ್ನೂ ಕಾಮಗಾರಿ ಪರವಾನಗಿಯನ್ನೇ ಪಡೆದಿಲ್ಲ. ಈ ಕೆಲಸಕ್ಕೆ ಅಮೆರಿಕಾದ ಸೇನಾ ಇಂಜಿನಿಯರ್‌ಗಳನ್ನು ಬಳಸಿದರೂ ಕನಿಷ್ಟ ಆರು ತಿಂಗಳು ಬೇಕಾಗುತ್ತಂತೆ.

ಎಸ್೨ಸಿ ಸಂಸ್ಥೆಯು ಅಲಾಸ್ಕಾದಲ್ಲಿ ಎ ಆರ್ ಎಂ ಮೂಲಕ ಬಾಟ್ಲಿಂಗ್‌ಗಾಗಿ ಟ್ರೂ ಅಲಾಸ್ಕಾ ಬಾಟ್ಲಿಂಗ್ ಅನ್ನೋ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಕಂಪೆನಯು ವ್ಯವಹಾರ ನಿಭಾಯಿಸಲಾಗದೆ ತನ್ನನ್ನೇ ಹಣಕಾಸು ನೀಡಿಕೆ ಸಂಸ್ಥೆ ಕೋವ್ ಪಾರ್ಟರ್ನ್ಸ್‌ಗೆ ಮಾರಿಕೊಂಡಿತ್ತು. ಈ ವರ್ಷದೊಳಗೆ ಅದು ಸಿಟ್ಕಾದಿಂದ ೫ ಕೋಟಿ ಗ್ಯಾಲನ್ ನೀರನ್ನು ಎತ್ತಲೇಬೇಕು; ಇಲ್ಲವಾದರೆ, ಅದಕ್ಕೆ ನೀಡಿರುವ ನೀರೆತ್ತುವ ಗುತ್ತಿಗೆಯೇ ರದ್ದಾಗುತ್ತೆ.

ಭಾರತಕ್ಕೆ ಅಲಾಸ್ಕಾದ ನೀರು ಬೇಕೆ?
ಏನೇ ಇರಲಿ, ಭಾರತಕ್ಕೆ ಅಲಾಸ್ಕಾದಿಂದ ನೀರು ತರಬೇಕೆ ಅನ್ನೋದೇ ಇಲ್ಲಿ ನಾವು, ಸಮಾಜ, ಸರ್ಕಾರ ನಿರ್ಧರಿಸಬೇಕಾಗಿರೋ ವಿಷಯ. ಹಿಮಾಲಯದ ಗ್ಲೇಸಿಯರ್‌ಗಳು ಕುಗ್ಗುತ್ತಿವೆ ಎಂಬುದನ್ನು ಒಪ್ಪಿಕೊಂಡರೂ, ಮಳೆಯ ಪ್ರಮಾಣ ಹೆಚ್ಚುಕಡಿಮೆಯಾಗಿದೆ ಎನ್ನುವುದನ್ನು ಒಪ್ಪಿಕೊಂಡರೂ, ನಮ್ಮ ದೇಶದಲ್ಲಿ ನೀರಿನ ನಿರ್ವಹಣೆ ಸರಿಯಾದರೆ ಸಮಸ್ಯೆ ಇರುವುದಿಲ್ಲ ಎನ್ನುವುದು ಒಂದು ಸಹಜ ತರ್ಕ. ರಾಜಕೀಯ ದೃಢತೆ ಇದ್ದರೆ ನೀರನ್ನು ಸಂಗ್ರಹಿಸುವ ಸಾವಿರಾರು ವಿಧಾನಗಳನ್ನು ಅನುಸರಿಸಿ ಇಡೀ ದೇಶವು ನೀರಿನ ಸಮೃದ್ಧತೆಯಿಂದ ಕೂಡಿರುವಂತೆ ಮಾಡಬಹುದು. ಕುಡಿಯುವ ನೀರು ಶುದ್ಧವಾಗಿರಬೇಕು, ನಿಜ. ಹಾಗಂತ ಶತಮಾನಗಳ ಕಾಲ ನಮ್ಮ ಹಿರೀಕರು ವಿಷಪೂರಿತ ನೀರನ್ನೇನಾನದೂ ಕುಡಿದಿದ್ದರೆ ನಮ್ಮ ಪೀಳಿಗೆ ಇಷ್ಟೆಲ್ಲ ಆರೋಗ್ಯದಿಂದ ಇರುತ್ತಿರಲಿಲ್ಲ. ಅತಿಯಾದ ಕೀಟನಾಶಕಗಳ ಬಳಕೆ, ಅಂತರ್ಜಲಕ್ಕೆ ರಾಸಾಯನಿಕಗಳ ಸೇರ್ಪಡೆ, ಎಲ್ಲಕ್ಕಿಂತ ನೀರಿನ ದುಂದು ಬಳಕೆ - ಇದೇ ನಮ್ಮ ನೀರಿನ ಸಮಸ್ಯೆಗೆ ಕಾರಣ. ಅದಿಲ್ಲದೇ ಹೋಗಿದ್ದರೆ ರಾಜಸ್ಥಾನದಲ್ಲಿ ರಾಜೇಂದ್ರ ಸಿಂಗ್ ಬತ್ತಿಹೋದ ನದಿಗಳಿಗೆ ಜೀವ ತರುವುದು ಎಂದರೇನು?
ನೀರಿಗಾಗಿ ಹೋರಾಡುವ ಪತ್ರಕರ್ತರ ದೊಡ್ಡ ಪಡೆಯೇ ನಮ್ಮಲ್ಲಿದೆ. ಕರ್ನಾಟಕದ ಶ್ರೀಪಡ್ರೆ ಅಂಥ ನೀರು ತಜ್ಞ ಪತ್ರಕರ್ತರು. ನೀರಿನ ಸಮರ್ಥ ನಿರ್ವಹಣೆಯಿಂದ ಹೇಗೆ ಕೊರತೆಯನ್ನು ಕಳೆದು ಮಿಗತೆ ಸಾಧಿಸಬಹುದು ಎಂಬ ಅಸಂಖ್ಯ ಸಮಕಾಲೀನ ಕಥೆಗಳನ್ನು ಅವರು ನೀಡಿದ್ದಾರೆ. ಇಂಥ ಪತ್ರಿಕೋದ್ಯಮ ದೇಶದೆಲ್ಲೆಡೆ ಬೆಳೆದಿದೆ. ಹಲವು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.
ನಮ್ಮ ದೇಶದ ಅಂತರ್ಜಲವನ್ನೇ ಖಾಸಗೀಕರಣ ಮಾಡುವ ಯತ್ನಗಳು ಹಲವೆಡೆ ನಡೆದಿವೆ. ಬೆಂಗಳೂರಿನಲ್ಲಿ ನೀರಿನ ಕೊರತೆ ಇದ್ದರೆ ಖಾಸಗಿ ಸಂಸ್ಥೆಗಳು ಇಂಥ ಕೊಳವೆ ಬಾವಿಗಳಿಂದಲೇ ನೀರು ಎತ್ತುತ್ತವೆ; ದುಬಾರಿ ಬೆಲೆಗೆ ಮಾರುತ್ತವೆ. ಜಲ ನಮ್ಮ ರಾಷ್ಟ್ರೀಯ ಸಂಪತ್ತು. ಅದನ್ನು ಖಾಸಗೀಕರಣಗೊಳಿಸುವುದೇ ಒಂದು ಅಪರಾಧ. ಅದರ ಜೊತೆಗೆ ಅಲಾಸ್ಕಾದಿಂದ ನೀರು ತಂದು ಕುಡಿಯುವುದು ಎಂದರೆ….? ನಮ್ಮಲ್ಲಿ ಇರುವ ಸಾಧ್ಯತೆಗಳು ಕೊನೆಗೊಳ್ಳುವರೆಗೂ ಇಂಥ ಸಂಭಾವ್ಯತೆಯ ಬಗ್ಗೆ ಯೋಚಿಸುವುದು ಎಷ್ಟು ಸರಿ?
ನೀರಿನ ಸಮಸ್ಯೆಗೆ ನದೀಜೋಡಣೆಯೇ ಪರಿಹಾರ ಎಂಬ ಸ್ವದೇಶಿ ಚಿಂತನೆಯೊಂದು ನಮ್ಮಲ್ಲೀಗ ಬಲವಾಗಿದೆ. ಆದರೆ ಅದು ಎಷ್ಟು ಅಪಾಯಕಾರಿ ಎಂಬ ಕಲ್ಪನೆಯೂ ಅಂಥ ಅಭಿಯಾಣಿಗಳಿಗೆ ಇಲ್ಲದಿರುವುದು ಶೋಚನೀಯ. ಪ್ರಕೃತಿಯನ್ನು ಮೀರಿ ನಾವೇನೂ ಮಾಡಲಾರೆವು; ಪ್ರಕೃತಿಯು ರೂಪಿಸಿದ ಜೀವ ಸಂತುಲನ ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ನಮಗೆ ಹಕ್ಕಿಲ್ಲ ಎಂದು ನಾವು ತಿಳಿದುಕೊಳ್ಳುವವರೆಗೂ ಇಂಥ ಕಲ್ಪನೆಗಳಿಗೆ ಸ್ಕೋಪ್ ಇದ್ದೇ ಇರುತ್ತದೆ.
ಎಸ್೨ಸಿ ಸಂಸ್ಥೆಯ ಹೇಳಿಕೆಯಿಂದ ನಮ್ಮ ದೇಶದ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ಎದ್ದರೆ ಒಳ್ಳೇದೇ.

ಭಾನುವಾರ, ಅಕ್ಟೋಬರ್ 10, 2010

ನೀರು “ಸ್ವರ್ಗದ ಹಾದಿ”

 ಶುಚಿ ಗೊಳಿಸಲು ನೀರು ಅಗತ್ಯವಾಗಿದೆ. ಇಸ್ಲಾಂ ನೀರನ್ನು ಶುಚಿ ಗೊಳಿಸುವ ಒಂದು ಸಾಧನವನ್ನಾಗಿ ಮಾಡಿದೆ. ನಮಾಝ್ ನಿರ್ವಹಿಸುವವರು ಎಲ್ಲ ರೀತಿಯ ಅಶುದ್ಧಿಗಳಿಂದ ಶುದ್ಧವಾಗಿರಬೇಕು ಮತ್ತು ಈ ಅಶುದ್ಧಿಗಳನ್ನು ನೀರಿನಿಂದ ಶುದ್ಧಗೊಳಿಸಬೇಕು. ನೀರನ್ನು 4 ವಿಧಗಳಲ್ಲಿ ವಿಂಗಡಿಸಬಹುದು.

1. ತಹೂರ್ 2. ತಾಹಿರ್ 3. ಮುತನಜ್ಜಿಸ್ 4. ಮುಸ್ತಅಮಲ್
1. ತಹೂರ್ ನೀರು : ತಹೂರ್ ಎಂದರೆ ಶುದ್ಧ ನೀರು ಮಾತ್ರವಲ್ಲ ಇತರ ವಸ್ತುಗಳನ್ನು ಶುದ್ಧಗೊಳಿಸಲು ಸಾಮರ್ಥ್ಯ ಹೊಂದಿರುವ ನೀರು.

ಉದಾ: ಸಮುದ್ರದ ನೀರು, ನದಿಗಳ ನೀರು, ನಲ್ಲಿ ನೀರು, ಕಾರಂಜಿಯ ನೀರು, ಕೆರೆಯ ನೀರು, ಮಳೆಯ ನೀರು, ಬಾವಿಯ ನೀರು ಇತ್ಯಾದಿ
2. ತಾಹಿರ್ ನೀರು : ತಾಹಿರ್ ಸ್ವತಃ ಶುದ್ಧವಿರುವ ನೀರು. ಆದರೆ ಇತರ ವಸ್ತುಗಳನ್ನು ಶುದ್ಧಗೊಳಿಸಲು ಸಾಮರ್ಥ್ಯವಿಲ್ಲದ ನೀರು. ಉದಾ: ಸೀಯಾಳದ ನೀರು, ಚಹಾ, ಶರಬತ್ತು ಇತ್ಯಾದಿ
3 . ಮುತನಜ್ಜಿಸ್ ನೀರು : ಎಂದರೆ ಮಲಿನ ಗೊಂಡ ನೀರು ಎಂದರ್ಥ. ಶುದ್ಧ ನೀರಿಗೆ ಯಾವುದೇ ಮಾಲಿನ್ಯ ಬಿದ್ದು ನೀರಿನ ನಿಜ ರೂಪದಲ್ಲಿ ವ್ಯತ್ಯಾಸ ಉಂಟಾದರೆ ಅದನ್ನು ಮುತನಜ್ಜಿಸ್ ನೀರು ಎನ್ನುತ್ತಾರೆ.
4. ಮುಸ್ತಅಮಲ್ ನೀರು : ಒಮ್ಮೆ ವುಝೂ ಅಥವಾ ಸ್ನಾನಕ್ಕಾಗಿ ಉಪಯೋಗಿಸಿದ ನೀರು. ಅದನ್ನು ಪುನಃ ಅದೇ ಉದ್ದೇಶಕ್ಕಾಗಿ ಬಳಸ ಬಾರದು. ಮೇಲಿನ ನಾಲ್ಕು ವಿಧದ ನೀರಿನಲ್ಲಿ ಮೊದಲ ಎಂದರೆ ತಹೂರ್ ನೀರಿನಿಂದ ಮಾತ್ರ ವುಝೂ ಅಥವಾ ಸ್ನಾನ ಮಾಡಬಹುದು. ಎಂದೆ ಶುದ್ದಿ ಗಳಿಸಬಹುದು. ಇತರ ಯಾವುದೇ ವಿಧದ ನೀರಿನಿಂದ ಮಾಡಿದ ವುಝೂ ಅಥವಾ ಸ್ನಾನ ಸಿಂಧುವಾಗುವುದಿಲ್ಲ. ಮುತನಜ್ಜಿಸ್ ನೀರನ್ನು ಬಿಟ್ಟು ಇತರ ನೀರು ಬೇರೆ ಅವಶ್ಯತೆಗಳಿಗೆ ಉಪಯೋಗಿಸ ಬಹುದು . ಏಕೆಂದರೆ ಆ ನೀರು ಶುದ್ಧವಾಗಿಯೇ ಇರುತ್ತದೆ.
ನೀರಿನ ಇನ್ನೆರಡು ವಿಧಗಳು:ನೀರು ತಹೂರ್ ಮತ್ತು ಮುತನಜ್ಜಿಸ್ ಎಂದು ಬೇರ್ಪಡಿಸಲು ನೀರನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು.
1. ಅಲ್-ಮಾಉಲ್ ಕಲೀಲ್ (ಕಡಿಮೆ ನೀರು)
2. ಅಲ್-ಮಾಉಲ್ ಕಸೀರ್ (ಹೆಚ್ಚು ನೀರು)
'ಎರಡು ಕುಲ್ಲತ್' ಗಿಂತ ಕಡಿಮೆ ಇದ್ದರೆ ಅದನ್ನು ಆಲ್-ಮಾಉಲ್ ಕಲೀಲ್ (ಕಡಿಮೆ ನೀರು) ಮತ್ತು 'ಎರಡು ಕುಲ್ಲತ್' ಗಿಂತ ಹೆಚ್ಚು ಇದ್ದರೆ ಅದನ್ನು ಆಲ್-ಮಾಉಲ್ ಕಸೀರ್ (ಹೆಚ್ಚು ನೀರು)ಎನ್ನುತ್ತಾರೆ.
ಒಂದು ಕಾಲು ಮೊಳ ಉದ್ದ ಒಂದು ಕಾಲು ಮೊಳ ಅಗಲ ಮತ್ತು ಒಂದು ಕಾಲು ಮೊಳ ಆಳದ ಹೊಂಡದಲ್ಲಿ ಹಿಡಿಯುವಷ್ಟು ನೀರನ್ನು 'ಎರಡು ಕುಲ್ಲತ್' ನೀರು ಎನ್ನುತ್ತಾರೆ. ಸುಮಾರು ಇನ್ನೂರು ಲೀಟರಿನಷ್ಟು.
'ಎರಡು ಕುಲ್ಲತ್' ಗಿಂತ ಕಡಿಮೆ ನೀರಿನಲ್ಲಿ (ಅಲ್-ಮಾಉಲ್ ಕಲೀಲ್) ಮಾಲಿನ್ಯ ಬಿದ್ದರೆ ಮತ್ತು ನೀರಿನ ಗುಣಗಳಲ್ಲಿ ವ್ಯತ್ಯಾಸ ಉಂಟಾಗದಿದ್ದರೂ ಆ ನೀರು ' ಮುತನಜ್ಜಿಸ್' (ಅಶುದ್ಧ) ಆಗುತ್ತದೆ.
ನೀರು 'ಎರಡು ಕುಲ್ಲತ್' ಗಿಂತ ಹೆಚ್ಚಿದ್ದು (ಅಲ್-ಮಾಉಲ್ ಕಸೀರ್)ಅದರಲ್ಲಿ ಮಾಲಿನ್ಯ ಬಿದ್ದು ನೀರಿನ ಗುಣಗಳಲ್ಲಿ ವ್ಯತ್ಯಾಸ ಉಂಟಾದರೆ ಆ ನೀರು ಕೂಡಾ ' ಮುತನಜ್ಜಿಸ್' (ಅಶುದ್ಧ) ಆಗುತ್ತದೆ. ಅಲ್-ಮಾಉಲ್ ಕಸೀರ್ ನಲ್ಲಿ ಮಾಲಿನ್ಯ ಬಿದ್ದರೂ ನೀರಿನ ಗುಣಗಳಲ್ಲಿ(ವಾಸನೆ, ರುಚಿ ಮತ್ತು ಬಣ್ಣ)ವ್ಯತ್ಯಾಸ ಆಗದಿದ್ದರೆ ಅದರಿಂದ ವುಝೂ ಮತ್ತು ಸ್ನಾನ ಮಾಡಬಹುದು. ಆ ನೀರು ಮುತನಜ್ಜಿಸ್ ಆಗಿರುವುದಿಲ್ಲ.

ಶನಿವಾರ, ಅಕ್ಟೋಬರ್ 9, 2010

ಜಲ ಸಂರಕ್ಷಣೆ

ಇಂದು ಎಲ್ಲೆಡೆಯೂ ಜಲಸಂರಕ್ಷಣೆಯ ಮಾತು ಕೇಳಿಬರುತ್ತಿದೆ. ಜಲಸಂರಕ್ಷಣೆ ಎಂದರೇನು? ಮುಂದಿನ ಪೀಳಿಗೆಗಳೂ ನಮ್ಮ ಹಾಗೆಯೇ ನೀರನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವುದೇ ಜಲಸಂರಕ್ಷಣೆ ಎಂದು ಸರಳವಾಗಿ ಹೇಳಬಹುದು.
ಜಲಸಂರಕ್ಷಣೆ ಯಾಕೆ ಬೇಕು? ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಇಂಥ ನೀರೇ ಸಿಗದೆ ಹೋದರೆ ಬದುಕು ಬರಡಾಗುತ್ತದೆ. ನೀರಿಗಾಗಿ ಇಂದು ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದ. ನಗರಗಳಲ್ಲಿ ನೀರಿನ ಸರಬರಾಜು ಅಸ್ತವ್ಯಸ್ತವಾಗುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನು ಹೊಲಗದ್ದೆಗಳಿಗೆ ಬೇಕಾದ ನೀರಂತೂ ಸಿಗುವುದೇ ಕಷ್ಟವಾಗಿದೆ.
ಹಾಗೆಂದು ನೀರು ಹೆಚ್ಚಾಗುತ್ತಲೂ ಇಲ್ಲ; ಕಡಿಮೆಯೂ ಆಗುವುದಿಲ್ಲ. ಭೂಮಿಯ ನೀರಿನ ಪ್ರಮಾಣ ಕಡಿಮೆಯಾಗದಿದ್ದರೂ, ನೀರು ಸಿಗದೆ ಹೋಗುತ್ತದೆ; ಬರಗಾಲ ಹೆಚ್ಚಾಗುತ್ತದೆ. ಆದ್ದರಿಂದಲೇ ಜಲಸಂರಕ್ಷಣೆಗೆ ಮಹತ್ವ ಬಂದಿದೆ.
ಜಲಸಂರಕ್ಷಣೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವು ಮಳೆನೀರು ಸಂಗ್ರಹ ಮತ್ತು ಛಾವಣಿ ನೀರು ಸಂಗ್ರಹ. ವರ್ಷದಲ್ಲಿ ಮೂರ್‍ನಾಲ್ಕು ತಿಂಗಳುಗಳ ಕಾಲ ಬೀಳುವ ಮಳೆನೀರನ್ನು ಸಂಗ್ರಹಿಸಿದರೆ ಇಡೀ ವರ್ಷವೂ ನೀರಿನ ಸಮಸ್ಯೆ ಇಲ್ಲದೆ ಬಾಳಬಹುದು. ಈಗಾಗಲೇ ದೇಶದ ಹಲವು ನಗರ - ಹಳ್ಳಿಗಳಲ್ಲಿ ಈ ಪ್ರಯೋಗವು ಯಶಸ್ವಿಯಾಗಿ ನಡೆದಿದೆ. ಇದನ್ನು ಮಳೆ ಕೊಯ್ಲು ಎಂದು ಕರೆಯುತ್ತಾರೆ.
ಕೇವಲ ನೀರಿನ ಸಂಗ್ರಹವೇ ಜಲಸಂರಕ್ಷಣೆ ಆಗುವುದಿಲ್ಲ. ನಮ್ಮ ಮನೆಗಳಲ್ಲಿ ಬಳಸುವ ನೀರಿನ ಮಿತವ್ಯಯದ ಬಗ್ಗೆ ಗಮನ ಕೊಡುವುದು, ನೀರು ಪೋಲಾಗದಂತೆ ಎಚ್ಚರ ವಹಿಸುವುದು, ಸಾರ್ವಜನಿಕ ಜಲ ಸರಬರಾಜು ವ್ಯವಸ್ಥೆಗಳಲ್ಲಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವುದು, ನೀರು ಬಳಕೆಯ ಬಗ್ಗೆ ನಿರಂತರವಾಗಿ ಜನಜಾಗೃತಿ ಮಾಡುವುದು - ಇವೆಲ್ಲವೂ ಜಲಸಂರಕ್ಷಣೆಯ ವಿವಿಧ ಮಾರ್ಗಗಳು.
ಇಂದು ಜಲಸಂರಕ್ಷಣೆಯ ಚಳವಳಿ ವ್ಯಾಪಕವಾಗಿ ಹಬ್ಬಿದೆ. ಕರ್ನಾಟಕದಲ್ಲಿ ನೀರಿನ ಬಗ್ಗೆ ಶ್ರೀ ಪಡ್ರೆಯವರು ಮಾಡುತ್ತಿರುವ ಜಾಗೃತಿಯಿಂದಾಗಿ ಸಾರ್ವಜನಿಕರು ಈ ಬಗ್ಗೆ ಗಮನ ನೀಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಉತ್ತಮ ಲೇಖನಗಳು ಬರುತ್ತಿವೆ. ನೀರನ್ನು ಸಂರಕ್ಷಿಸುವ ಬಗ್ಗೆ ಜನಜಾಗೃತಿ ಮಾಡಿದ ವ್ಯಕ್ತಿಗಳಿಗೆ ಸಮಾಜದ ಮಾನ್ಯತೆ ಸಿಗುತ್ತಿದೆ. ಇಷ್ಟಾಗಿಯೂ ಜಲಸಂರಕ್ಷಣೆಯ ಬಗ್ಗೆ ಉಚ್ಚ ಸ ಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮಾಜದ ಎಲ್ಲ ವರ್ಗಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿದಾಗಲೇ ಜಲಸಂರಕ್ಷಣೆಯು ನಿಜವಾಗಿ ಜಾರಿಯಾಗುತ್ತದೆ. ಸಮಾಜವು ಹಸನಾಗುತ್ತದೆ.

ಗುರುವಾರ, ಅಕ್ಟೋಬರ್ 7, 2010

ನೀರನ್ನು ನಾವು ಉಳಿಸಿದರೆ, ಮುಂದೆ ಅದು ನಮ್ಮನ್ನುಳಿಸಬಹುದು


ಕಾಂಬೋಡಿಯಾ, ಕೀನ್ಯಾದಂಥ ರಾಷ್ಟ್ರಗಳಲ್ಲಿ ಮಾತ್ರವಲ್ಲ ಬೆಂಗಳೂರಿನಂಥ ಬೆಂಗಳೂರೇ ನೀರಿನ ಭೀಕರ ಕೊರತೆ ಎದುರಿಸುವ ದಿನ ದೂರವಿಲ್ಲ. ನೀರಿನಂತೆ ಹರಿದುಬರುತ್ತಿರುವ ಸುತ್ತಲಿನ ರಾಜ್ಯಗಳ ಜನ, ಬರಿದಾಗುತ್ತಿರುವ ಹಳ್ಳಿಗಳು, ನಗರದ ಕೆರೆಗಳು ನೀರಿನ ಒರತೆಯನ್ನು ಒರೆಸಿಹಾಕುತ್ತಿವೆ. ಹಾಗಾದರೆ, ನೀರನ್ನು ಉಳಿಸುವುದೊಂದೇ ಇದಕ್ಕೆ ಪರಿಹಾರವಾ? ಸಮಸ್ಯೆ ಇನ್ನಷ್ಟು ಕ್ಲಿಷ್ಟವಾಗುತ್ತಾ ಸಾಗುತ್ತಿದೆ. ಇದಕ್ಕೆ ಮಾರ್ಗೋಪಾಯಗಳೇನು ?

ಇತ್ತೀಚಿಗೆ ಯಾವುದೋ ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದು, ಕಾಂಬೋಡಿಯಾ, ಕೀನ್ಯಾ ದೇಶಗಳ ಕುರಿತಾಗಿದ್ದು. ಅದರಲ್ಲಿ ನೋಡಿದ ಪ್ರಕಾರ, ಅಲ್ಲಿನ ಜನರ ಬರಗಾಲದಿಂದ ತತ್ತರಿಸುತ್ತಿದ್ದಾರೆ. ನೀರೇ ಇಲ್ಲದೆ ಇಲ್ಲಿನ ಭೂಮಿ ಬಾಯ್ಬಿಟ್ಟಿದೆ. ಎಲ್ಲಿ ನೋಡಿದರಲ್ಲಿ ಬಿಸಿಲ ಧಗೆ, ನೀರ ಹುಡುಕಾಟದಲ್ಲಿರುವ ಜನರು ಮತ್ತು ಪ್ರಾಣಿಗಳು. ಭೂಮಿಯ ಆಳದ ಅಂತರ್ಜಲ ಬತ್ತಿ ಬರಿದಾಗಿದೆ. ನೀರೇ ಇಲ್ಲವಾದ್ದರಿಂದ ಯಾವುದೇ ಬೆಳೆಯನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ನೀರಿಲ್ಲದೆಯೂ ಬೆಳೆಯಬಲ್ಲ ವಿಷಜಾತಿಗೆ ಸೇರಿದ ಗಡ್ಡೆಗಳನ್ನು ತಿನ್ನುತ್ತಿದ್ದಾರೆ. ಈ ವಿಷಕಾರಿ ಗಡ್ಡೆ ಅವರ ಜೀವಕ್ಕೆ ಅಪಾಯವನ್ನು ತರಬಲ್ಲದು. ಆದರೆ ಅದನ್ನು ತಿನ್ನದಿದ್ದರೆ ಆ ಜನರು ಹಸಿವಿನಿಂದ ನರಳುತ್ತಾ ಸಾಯುಬೇಕಾಗುತ್ತದೆ. ಹಾಗಾಗಿ ಅವರು ಇದನ್ನೇ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಿದೆ ಇವರ ಬದುಕಿನ ಸ್ಥಿತಿ.

ಇಂದು ನಗರಗಳು ಅತೀ ವೇಗವಾಗಿ ಬೆಳೆಯುತ್ತಿವೆ. ಆಧುನೀಕರಣ, ನಗರೀಕರಣ, ಕೈಗಾರಿಕೀಕರಣಗಳು ನಮ್ಮ ನೈಸರ್ಗಿಕ ಸಂಪತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕಾರ್ಖಾನೆಗಳ ಮತ್ತಿತರ ತ್ಯಾಜ್ಯ ವಸ್ತುಗಳನ್ನು ನೇರವಾಗಿ ನದಿಗಳಿಗೆ ಬಿಡುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿ ದಿನೇ ದಿನೇ ಜನಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದ್ದು ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಅಪಾಯದ ಮಟ್ಟವನ್ನು ದಾಟುತ್ತಿದೆ. ಸಂಶೋಧನೆಯೊಂದರ ಪ್ರಕಾರ, ಇಂದು ಜಗತ್ತಿನಾದ್ಯಂತ ಸುಮಾರು ಒಂದು ಬಿಲಿಯನ್ ಜನರು ಸ್ವಚ್ಛ ಕುಡಿಯುವ ನೀರು ಸಿಗದೆ ನರಳಾಡುತ್ತಿದ್ದಾರೆ. ಒಂದು ವೇಳೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ 2025 ವೇಳೆಗೆ ಈ ಸಂಖ್ಯೆ 2.3 ಬಿಲಿಯನ್ ತಲುಪುತ್ತದೆ.

ಬೆಂಗಳೂರನ್ನು ಉದಾಹರಣೆಗೆ ತೆಗೆದುಕೊಂಡರೆ ಇಲ್ಲಿನ ನೀರಿನ ಅತಿದೊಡ್ಡ ಮೂಲ ನೂರು ಕಿಲೋಮೀಟರ್ ದೂರದಲ್ಲಿರುವ ಕಾವೇರಿ ನದಿ. ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರನ್ನು ಕಾವೇರಿ ನದಿಯಿಂದ ಇಲ್ಲಿಗೆ, ವಾರ್ಷಿಕ 350ರಿಂದ 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರಬರಾಜು ಮಾಡಲಾಗುತ್ತದೆ. ಇಲ್ಲಿನ ಮತ್ತೆರಡು ಪ್ರಮುಖ ಮೂಲಗಳೆಂದರೆ ತಿಪ್ಪಗೊಂಡನ ಹಳ್ಳಿ ಜಲಾಶಯ ಮತ್ತು ಅಂತರ್ಜಲ. ಆದರೆ ಇತ್ತೀಚಿನ ದಿನಗಳಲ್ಲಿ ತಿಪ್ಪಗೊಂಡನ ಹಳ್ಳಿ ಜಲಾಶಯದ ನೀರು ಗಣನೀಯವಾಗಿ ಕಡಿಮೆ ಆಗುತ್ತಿದ್ದು, ಮುಂದೊಂದು ದಿನ ಒಣಗಿ ಹೋಗುವ ಸಾಧ್ಯತೆ ಇದೆ. ಇನ್ನು ಅಂತರ್ಜಲದ ಮಟ್ಟವಂತೂ ದಿನೇ ದಿನೇ ಕುಸಿಯುತ್ತಿದೆ. ಇಡೀ ಬೆಂಗಳೂರಿನ ಜನರು ಕೇವಲ ಒಂದೇ ಕಾವೇರಿ ನದಿಯ ನೀರಿನ ಮೇಲೆ ಅವಲಂಬಿತರಾದರೆ, ಆ ನದಿ ಹೆಚ್ಚು ದಿನ ಆಸರೆ ನೀಡಲು ಸಾಧ್ಯವಿಲ್ಲ.

ಹಿಂದೆ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ದೊಡ್ಡ ಕೆರೆಗಳಿದ್ದವು. ಆದರೆ ಬೆಂಗಳೂರು ಬೆಳೆದಂತೆಲ್ಲಾ ಕೆರೆಗಳ ಸಂಖ್ಯೆ ಕಡಿಮೆ ಆಗುತ್ತಾ ಬಂತು. ಇತ್ತೀಚಿನ ವರದಿಯೊಂದರ ಪ್ರಕಾರ ಇಂದು ಕೇವಲ 81 ಕೆರೆಗಳು ಮಾತ್ರ ಉಳಿದಿವೆ. ಅಂದರೆ ಉಳಿದ 119 ಕೆರೆಗಳನ್ನು ಬೆಂಗಳೂರು ನುಂಗಿಬಿಟ್ಟಿದೆ.

ಅಂಕಿ ಅಂಶವೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 50,000ಕ್ಕೂ ಹೆಚ್ಚು ಮಕ್ಕಳು ತಮ್ಮ 5ನೇ ವರ್ಷ ದಾಟುವುದರೊಳಗಾಗಿ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಕಲುಷಿತ ನೀರಿನಿಂದ ಉಂಟಾಗುವ ಬೇಧಿ, ಜಠರ-ಕರುಳುಗಳ ಉರಿಯೂತ, ಹೆಪಟೈಟಿಸ್ ನಂತಹ ರೋಗಗಳು. ನಮ್ಮ ದೇಶದಲ್ಲಿ ಇಂದು ಸುಮಾರು 224 ದಶಲಕ್ಷ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ.

ಭೂಮಿಯ ಮೂರನೇ ಎರಡು ಭಾಗ ನೀರಿನಿಂದಾವೃತವಾಗಿದೆ. ಆದರೆ, ಈ ಎಲ್ಲಾ ನೀರೂ ಬಳಕೆಗೆ ಯೋಗ್ಯವಲ್ಲ. ಭೂಮಿಯ ಒಟ್ಟು ನೀರಿನ ಸೆಲೆಯ 3 ಶೇಕಡಾ ಮಾತ್ರ ಸಿಹಿನೀರು ಲಭ್ಯ. ಸಿಹಿನೀರಿನ 30 ಶೇಕಡಾ ಪಾಲು ಅಂತರ್ಜಲದಿಂದ ದೊರೆತರೆ, 0.3 ಶೇಕಡಾ ಪಾಲು ನದಿ, ಕೆರೆ, ಮತ್ತಿತರ ಮೂಲಗಳಿಂದ ದೊರೆಯುತ್ತದೆ. ಉಳಿದ ಸಿಂಹಪಾಲು ಮಂಜುಗಡ್ಡೆಗಳ ರೂಪದಲ್ಲಿದ್ದು, ಅವುಗಳ ಬಳಕೆ ಕಷ್ಟ.

ನೀರಿನ ಅತಿಯಾದ ಬೇಡಿಕೆ, ಅಂತರ್ಜಲವನ್ನು ಹೆಚ್ಚು ಹೆಚ್ಚು ಉಪಯೋಗಿಸುವಂತೆ ಮಾಡುತ್ತಿದೆ. ಇದು, ನೀರಿನ ಎಲ್ಲ ಮೂಲಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಭೂಮಿಯೊಳಗೆ ಇಂಗುವ ನೀರಿಗಿಂತ ಅಲ್ಲಿಂದ ಹೊರತೆಗೆಯುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದು ಅಂತರ್ಜಲದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ. ಅಂತರ್ಜಲದ ಅಭಾವದಿಂದಾಗಿ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ನೀರಿನ ಬೆಲೆ ಏರುತ್ತಿದೆ. ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ ದೇಶಾದ್ಯಂತ ಜಲಕ್ಷಾಮ ತಲೆದೂರುವ ಅಪಾಯವಿದೆ. ಬೃಹತ್ ನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ, ಅಪಾರ್ಟ್ ಮೆಂಟ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಒಂದೊಂದು ಕಟ್ಟಡಕ್ಕೂ ಹತ್ತಾರು ಬೋರ್ ವೆಲ್ ಗಳನ್ನು ಕೊರೆಯಲಾಗುತ್ತಿದೆ. ಬೆಂಗಳೂರಿನಲ್ಲೇ ಪ್ರತಿ ದಿನ ಸುಮಾರು 290 ಮಿಲಿಯನ್ ಲೀಟರ್ ಅಂತರ್ಜಲವನ್ನು ಹೊರ ತೆಗೆಯಲಾಗುತ್ತಿದೆ.

ಅನಿಯಂತ್ರಿತವಾಗಿ ನೀರನ್ನು ಹೊರತೆಗೆಯುವುದರಿಂದ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಹಲವಾರು ಕಡೆಗಳಲ್ಲಿ ಅಂತರ್ಜಲ 1000ದಿಂದ 1500 ಅಡಿಗಳಷ್ಟು ಆಳಕ್ಕೆ ಇಳಿದಿದೆ. ನಿರ್ದಿಷ್ಟ ಮಟ್ಟಕ್ಕಿಂತ ಆಳದಲ್ಲಿರುವ ನೀರಿನ ಬಳಕೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ನೀರಿನ ಕುರಿತು ಒಂದಿಷ್ಟು ಮಾಹಿತಿ:
* ನಮ್ಮ ದೇಹದಲ್ಲಿನ ನೀರಿನ ಪ್ರಮಾಣ, ನಿಗದಿತ ಪ್ರಮಾಣಕ್ಕಿಂತ 20 ಶೇಕಡಾ ಕಡಿಮೆಯಾದರೆ ನಾವು ಸಾಯುತ್ತೇವೆ.
* ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಸರಾಸರಿ ಹದಿನಾಲ್ಕು ಲಕ್ಷ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಸಾಯುತ್ತಿದ್ದಾರೆ.
* ನಮ್ಮ ದೇಶದ ಒಂದು ಲಕ್ಷದ ನಲವತ್ತೆಂಟು ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.
* ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವದ ಅರ್ಧದಷ್ಟು ಜನರು ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿ ನೀರಿಗೆ ಸಂಬಂಧಿಸಿದ ಹಲವು ಕಾಯಿಲೆಯಿಂದ ಬಳಲುತ್ತಿದ್ದಾರೆ.
* ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ 2025ನೇ ಇಸ್ವಿಯ ವೇಳೆಗೆ ವಿಶ್ವಾದ್ಯಂತ ಸುಮಾರು 270 ಕೋಟಿ ಜನರು ನೀರಿಗಾಗಿ ಹಗಲಿರುಳೂ ಪರದಾಡುವ ಪರಿಸ್ಥಿತಿ ಬರಬಹುದು.

ಪರಿಸ್ಥಿತಿ ಹೀಗಿರುವಾಗ ಮನೆಯ ನಲ್ಲಿಯಿಂದ ಒಂದೊಂದೇ ಹನಿ ಸೋರುತ್ತಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಪ್ರತಿ ನಿಮಿಷಕ್ಕೆ ಒಂದು ಹನಿ ನೀರು ಪೋಲಾಗುತ್ತಾ ಹೋದರೆ, ಒಂದು ವರ್ಷಕ್ಕೆ ಸುಮಾರು 45,000 ಲೀಟರ್ ನೀರು ಸೋರಿ ಹೋಗುತ್ತದೆ. ಈ ನೀರಿನಲ್ಲಿ ಒಬ್ಬ ಮನುಷ್ಯ ಸುಮಾರು 15 ತಿಂಗಳ ಕಾಲ ಬದುಕಬಹುದು. ಆದ್ದರಿಂದ ಹನಿ ಹನಿ ನೀರಿಗೂ ಅದರದ್ದೇ ಆದ ಮಹತ್ವವಿದೆ. ನೀರುಳಿಸಿ ನೋಡೋಣ,ಮುಂದೆ ಅದು ನಮ್ಮನ್ನುಳಿಸಬಹುದು.

ಶುಕ್ರವಾರ, ಅಕ್ಟೋಬರ್ 1, 2010

ರೈತಸ್ನೇಹಿ ಜೈವಿಕ ಕೀಟನಾಶಕ

ತರಕಾರಿ ಬೆಳೆಗಳಿಗೆ ಬರುವ ರೋಗಗಳನ್ನು ನಿಯಂತ್ರಿಸುತ್ತಲೇ ಮಣ್ಣಿನ ಫಲವತ್ತತೆ ಯನ್ನು ಕಾಪಾಡಿಕೊಳ್ಳುವ ಜೈವಿಕ ಕೀಟನಾಶಕವೊಂದನ್ನು ಮೈಸೂರಿನ ಹೆಬ್ಬಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಸಂಶೋಧನಾ ಕೇಂದ್ರ ರೂಪಿಸಿದೆ.
ಟೊಮೊಟೊ, ಮೆಣಸಿನಕಾಯಿ, ಕಬ್ಬು, ಬದನೆ, ಹೂ ಕೋಸು, ಎಲೆ ಕೋಸು ಮೊದಲಾದ ಬೆಳೆಗಳನ್ನು ಬೆಳೆಯುವ ಮೈಸೂರು ಹಾಗೂ ಸುತ್ತಮುತ್ತಲಿನ ರೈತರ ಮೊಗದಲ್ಲಿ ಈಗ ಸ್ವಲ್ಪ ನೆಮ್ಮದಿಯ ಭಾವವನ್ನು ಗುರುತಿಸಬಹುದು. ಈ ರೈತರು ಉತ್ತಮ ಇಳುವರಿ ಪಡೆಯುವುದರ ಜೊತೆಗೆ ಮಣ್ಣಿನ ಫಲವತ್ತತೆ ಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದಾರೆ. ರಾಸಾಯನಿಕ ಕೀಟನಾಶಕಗಳನ್ನು ಬಳಸದೆ ಕೇವಲ ಜೈವಿಕ ಕೀಟನಾಶಕಗಳನ್ನು ಬಳಸಿ ಪರಿಸರ ಸ್ನೇಹಿ ಬೇಸಾಯ ಮಾಡುತ್ತಿದ್ದಾರೆ.
ಕರ್ನಾಟಕ ತೋಟಗಾರಿಕೆ ಇಲಾಖೆ ಅನುಮೋದಿಸಿರುವ ಪೋನಾಲ್ಯಾಬ್ (ಬಯೋಕಂಟ್ರೋಲ್ ಲ್ಯಾಬ್) ಭಾರತ ಸರ್ಕಾರ, ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಿಂದ ಮಾನ್ಯತೆ ಪಡೆದಿದೆ. ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ತಲೆ ಎತ್ತಿರುವ ಈ ಸಂಶೋಧನಾ ಕೇಂದ್ರ ನಿತ್ಯ ಬಳಕೆಯ ತರಕಾರಿ ಗಿಡಗಳು, ಪ್ಲಾಂಟೇಶನ್ ಹಾಗೂ ದ್ವಿದಳ ಧಾನ್ಯ ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಸಸ್ಯ ಫಂಗಲ್ ಮತ್ತು ಬ್ಯಾಕ್ಟೀರಿಯಾ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆಸುತ್ತಿದೆ. ಬೇಸಾಯದಲ್ಲಿ ರೈತರಿಗೆ ಸಾಮಾನ್ಯವಾಗಿ ಎದುರಾಗುವ ತೊಂದರೆಗಳನ್ನು ನಿವಾರಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಉತ್ತಮ ಫಸಲನ್ನು ಪಡೆಯುವ ಸಲುವಾಗಿ ಜೈವಿಕ ಕೀಟನಾಶಕವೊಂದನ್ನು ಅಭಿವೃದ್ಧಿಪಡಿಸಿದೆ.
ಜೈವಿಕ ಕೀಟನಾಶಕ ತಯಾರಿಕೆ ಬೇಕಾದ ಅಂಶಗಳನ್ನು ವಿವಿಧ ರೀತಿಯ ಮಣ್ಣು ಮತ್ತು ಸಸ್ಯಗಳ ಭಾಗಗಳಿಂದಲೇ ಸಂಗ್ರಹಿಸುತ್ತಾರೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ಜೈವಿಕ ಕೀಟನಾಶಕವನ್ನು ಸಸ್ಯಗಳಿಗೆ ಸಿಂಪಡಿಸುವುದರಿಂದ ಅವುಗಳ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಲು ಸಹಾಯ ಮಾಡುತ್ತದೆ. ಜೈವಿಕ ಕೀಟನಾಶಕದಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಣ್ಣಿನ ಸುತ್ತಲೂ ಹರಡಿಕೊಂಡು ಉತ್ತಮ ಪೋಷಕಾಂಶ ಒದಗಿಸುವುದರ ಜೊತೆಗೆ ಅಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತವೆ. ಜೈವಿಕ ಕೀಟನಾಶಕಗಳು ಸಸ್ಯ ಬೆಳವಣಿಗೆಗೆ ಅವಶ್ಯಕವಾಗಿ ಬೇಕಾದ ಪೋಷಕಾಂಶಗಳಾದ ಪಾಸ್ಫರಸ್, ನೈಟ್ರೋಜನ್, ಸಲ್ಫರ್‌ಗಳನ್ನು ಸಸ್ಯಗಳಿಗೆ ಹೇರಳವಾಗಿ ಒದಗಿಸುತ್ತವೆ.
ಸಸ್ಯ ಸಂಬಂಧಿ ರೋಗಗಳು ಮಣ್ಣಿನಿಂದ, ಬೀಜಗಳಿಂದ ಹಾಗೂ ಗಾಳಿ ಮೂಲಕ ಹರಡುತ್ತವೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ಜೈವಿಕ ಕೀಟನಾಶಕ ಸಸ್ಯಗಳನ್ನು ಬಾಧಿಸುವ ಎಲ್ಲ ಬಗೆಯ ರೋಗಗಳನ್ನು ಸಮರ್ಥವಾಗಿ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಸಸ್ಯದ ಪೋಷಣೆಗೆ ಬೇಕಾದ ಸೂಕ್ತ ಪೋಷಕಾಂಶಗಳು, ಸೂಕ್ಷ್ಮಾಣು ಜೀವಿಗಳನ್ನು ನಿಸರ್ಗದಿಂದಲೇ ಸಂಗ್ರಹಿಸಿ ಅದನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ ಯಶಸ್ಸುಕಂಡಿದೆ. ಸಸ್ಯಗಳು ತಮ್ಮ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನಿಸರ್ಗದಿಂದಲೇ ಪಡೆದುಕೊಳ್ಳಲು ಈ ಜೈವಿಕ ಕೀಟನಾಶಕ ನೆರವಾಗುವುದರಿಂದ ಸಸ್ಯಗಳ ಫಲವಂತಿಕೆ ಮಟ್ಟ ಅಧಿಕವಾಗಿರುತ್ತದೆ. ಈ ಕೀಟನಾಶಕ ಸಸ್ಯಕ್ಕೆ ತಗಲುವ ಹಲವು ರೋಗಗಳ ವಿರುದ್ಧ ಏಕ ಕಾಲದಲ್ಲಿ ಹೋರಾಡುವ ಗುಣ ಹೊಂದಿದೆ.

ಈ ಜೈವಿಕ ಕೀಟನಾಶಕವನ್ನು ಮೂರು ರೀತಿಯಲ್ಲಿ ಸಸ್ಯಗಳಿಗೆ ಉಪಯೋಗಿಸಬಹುದು. ದ್ರವರೂಪದ ಕೀಟನಾಶಕವನ್ನು ಸಸ್ಯಗಳಿಗೆ ನೇರವಾಗಿ ಸಿಂಪಡಣೆ ಮಾಡಬಹುದು. ಜೈವಿಕ ಕೀಟನಾಶಕದ ಪೌಡರನ್ನು ಸಸ್ಯದ ಬೇರಿನ ಸುತ್ತ ಮಣ್ಣಿನಲ್ಲಿ ಮಿಶ್ರಣ (ಸಾಯಿಲ್ ಡ್ರೆಂಚಿಂಗ್) ಮಾಡಬಹುದು. ನರ್ಸರಿ ಮಾಡುವ ಸಂದರ್ಭದಲ್ಲಿ ತೆಂಗಿನ ತುರಿಯನ್ನು ಸಂಗ್ರಹಿಸಿ (ಕೋಕೋ ಪೀಟ್ ಮಿಕ್ಸಿಂಗ್) ಅದರೊಟ್ಟಿಗೆ ಪೌಡರ್ ಮಿಶ್ರಣ ಮಾಡಿ ಸಸ್ಯಗಳನ್ನು ಬೆಳೆಸಿದಾಗ ಉತ್ತಮ ಫಲಿತಾಂಶ ಲಭ್ಯವಾಗಿದೆ.

ಜೈವಿಕ ಕೀಟನಾಶಕವನ್ನು ಸಸ್ಯಗಳ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಪಡೆದ ಅನೇಕ ರೈತರು ಮೈಸೂರಿನ ಸುತ್ತಮುತ್ತ ಇದ್ದಾರೆ. ಎಲ್ಲ ರೀತಿಯ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಸಸ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳಾದ ಮಿಲ್‌ಡಿವ್ ಆಫ್ ಗಾರ್ಡ್ಸ್, ವಿಲ್ಟ್, ಬ್ಲೈಟ್ ಅಂಡ್ ಡೈಬ್ಯಾಕ್ ರೋಗಗಳನ್ನು ತಡೆಗಟ್ಟುವಲ್ಲಿ ಈ ಜೈವಿಕ ಕೀಟನಾಶಕ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಮೈಸೂರು ಪ್ರಾಂತ್ಯದಲ್ಲಿರುವ ಗುಜ್ಜೇಗೌಡನಪುರದ ಬಸವೇಶ್ವರ ನರ್ಸರಿ, ಮಾದಳ್ಳಿ ಗೇಟ್‌ನಲ್ಲಿರುವ ಮಹದೇಶ್ವರ ನರ್ಸರಿ, ಆಲನಹಳ್ಳಿಯಲ್ಲಿರುವ ಬಸವೇಶ್ವರ ಹೈಟೆಕ್ ನರ್ಸರಿಗಳು ಜೈವಿಕ ಕೀಟನಾಶಕ ಬಳಸಿ ಉತ್ತಮ ಫಲಿತಾಂಶ ಪಡೆದುಕೊಂಡಿರುವ ಫಲಾನುಭವಿಗಳು. ಲಭ್ಯವಿರುವ ಉತ್ಪನ್ನಗಳು ಪೋನಾಸ್ಟಾರ್ ಮತ್ತು ಕೌಶಿಕ್.
ಹೆಚ್ಚಿನ ಮಾಹಿತಿಗೆ ರೈತರು ಸಂಪರ್ಕಿಸಬೇಕಾದ ವಿಳಾಸ: ಪೋನಾಲ್ಯಾಬ್, ಎ-76, 4ನೇ ಮುಖ್ಯರಸ್ತೆ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೈಸೂರು-16. ದೂರವಾಣಿ ಸಂಖ್ಯೆ 0821- 2419995, ಮೊಬೈಲ್ 94498 72722, 94804 99999 ಸಂಪರ್ಕಿಸಿ.