ಶನಿವಾರ, ಸೆಪ್ಟೆಂಬರ್ 4, 2010

ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ

ಬೇವಿನಷ್ಟು ಕಹಿಯಿಲ್ಲದಿದ್ದರೂ, ಬೇವಿನಂತೆ ವಿಶೇಷ ಗುಣವುಳ್ಳದ್ದರಿಂದ ಕರಿಬೇವಿಗೆ ಆ ಹೆಸರು ಬಂದಿದೆ. ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಒಂದು ಬಗೆಯ ಸೊಪ್ಪು. ಸ್ವಾದ್ವಿಷ್ಟವಿಲ್ಲದಿದ್ದರೂ, ಸುವಾಸನೆ ಭರಿತವಾದ ಸಸ್ಯ. ಸಂಸ್ಕೃತದಲ್ಲಿ ಇದಕ್ಕೆ ಕಾಲಶಾಕ ಎನ್ನುತ್ತಾರೆ.

ಕಫ, ಪಿತ್ತ, ಜಠರದ ರೋಗ, ರಕ್ತದೊತ್ತಡ, ಮಧುಮೇಹ, ಉದರ ಸಂಬಂಧ ಸಮಸ್ಯೆ, ಆಮಶಂಕೆ, ಮಲಬದ್ಧತೆ, ಭೇದಿ ನಿವಾರಣೆಗೆ ಕರಿಬೇವು ಸಹಕಾರಿ. ಟಿಬಿ, ಜಾಂಡೀಸ್ ಹಾಗೂ ಸರ್ಜರಿ ನಂತರ ದೇಹದ ಆರೋಗ್ಯ ಸಮತೋಲನ ಕಾಪಾಡಲು ಕರಿಬೇವು ಸೇವನೆ ಒಳ್ಳೆಯದು.

ಉಪಯೋಗಗಳು:
* 1-2 ಟೀ ಚಮಚದಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

* ಭೇದಿ, ಆಮಶಂಕೆ ನಿವಾರಣೆಗೆ ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡಬಹುದು. ಅಥವಾ ಚೆನ್ನಾಗಿ ಅರೆದ ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಬೆರೆಸಿ ನೀಡಿದರೆ ಉಪಯುಕ್ತ.

* ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

* ಕುರು, ಗಾಯವಾದಾಗ ಕರಿಬೇವಿನ ಎಲೆಗಳನ್ನು ಅರೆದು ಸ್ವಲ್ಪ ಅರಿಶಿನದೊಂದಿಗೆ ಬೆರೆಸಿ ಅರೆದು ಹಚ್ಚಬಹುದು.

* ಕಾಮಾಲೆ ರೋಗವಿದ್ದಾಗ 10-12 ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅರೆದುಕೊಂಡು ಸುಮಾರು 60-100ಮಿ.ಲೀ ಎಳನೀರಿನೊಂದಿಗೆ ನೀಡಬಹುದು.

* ಸೊಳ್ಳೆ, ಇರುವೆ, ನೊಣ ಮುಂತಾದ ಕೀಟಗಳ ತೊಂದರೆ ತಪ್ಪಿಸಲು ಕರಿಬೇವಿನ ಸುವಾಸನೆ ಸಾಕು.

* ಕರಿಬೇವಿನ ಎಲೆಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವ ಕಾರಣ, ಹಸಿ ಎಲೆಯನ್ನು ಅಗಿದು ತಿಂದರೆ ಒಳ್ಳೆಯದು.

ಆಯುರ್ವೇದ ಔಷಧಗಳಲ್ಲಿ ಕರಿಬೇವಿಗೆ ವಿಶೇಷ ಸ್ಥಾನವುಂಟು. ಕರಿಬೇವಿನ ಸೊಪ್ಪಿನ ಉಪಯೋಗಗಳು ಇನ್ನೂ ಅನೇಕ ಇದ್ದೇ ಇದೆ. ಓದುಗರು ತಮಗೆ ತಿಳಿದ ಸಲಹೆಗಳು ನಮಗೆ ತಿಳಿಸಬಹುದು

ಕಾಮೆಂಟ್‌ಗಳಿಲ್ಲ: