ಸೋಮವಾರ, ಸೆಪ್ಟೆಂಬರ್ 20, 2010

ಚಾಮರಾಜನಗರ ಜಿಲ್ಲೆಯಲ್ಲಿ 400 ಹೆಕ್ಟೇರ್‌ನಲ್ಲಿ ಹೊಂಗೆ ಸಸಿ ನೆಡಲು ನಿರ್ಧಾರ

ಜುಲೈ 9ರ ಪ್ರಜಾವಾಣಿ ವಾರ್ತೆ

400 ಹೆಕ್ಟೇರ್‌ನಲ್ಲಿ ಹೊಂಗೆ ಸಸಿ ನೆಡಲು ನಿರ್ಧಾರ
ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ ಸಿದ್ಧ


ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೈವಿಕ ಇಂಧನದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಜುಲೈ 9ರಂದು ಉದ್ಘಾಟನೆಗೊಂಡಿದೆ.

'ರಾಜ್ಯ ಸರ್ಕಾರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ನಿತ್ಯ 150 ಲೀ. ಜೈವಿಕ ಇಂಧನದ ಉತ್ಪಾದನಾ ಗುರಿ ಹೊಂದಲಾಗಿದೆ. ರೈತರಿಂದ ಹೊಂಗೆ, ಬೇವು ಸೇರಿದಂತೆ ಜೈವಿಕ ಇಂಧನದ ಬೀಜ ಖರೀದಿಸಲಾಗುವುದು.

ಕೇಂದ್ರದ ಸ್ಥಾಪನೆಗೆ ಸರ್ಕಾರ 10 ಲಕ್ಷ ರೂ ನೀಡಿದೆ. ಇದರಲ್ಲಿ ಯಂತ್ರೋಪಕರಣಗಳಿಗೆ 8.50 ಲಕ್ಷ ರೂ ಖರ್ಚಾಗಿದೆ. ಉಳಿದ ಹಣದಲ್ಲಿ ರೈತರಿಂದ ಜೈವಿಕ ಇಂಧನ ಬೀಜಗಳನ್ನು ಖರೀದಿಸಲಾಗುವುದು. ಒಂದು ಕೆಜಿ ಹೊಂಗೆ ಬೀಜಕ್ಕೆ 12 ರೂ ಹಾಗೂ ಬೇವಿನ ಬೀಜಕ್ಕೆ 6 ರೂ ದರ ನಿಗದಿಪಡಿಸಲಾಗಿದೆ. ಒಂದು ಕ್ವಿಂಟಲ್ ಬೀಜದಲ್ಲಿ ಶೇ. 20ರಷ್ಟು ಇಂಧನ ಲಭಿಸಲಿದೆ. ಇದನ್ನು ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಇತರೇ ವಾಹನಗಳ ಬಳಕೆಗೆ ಉಪಯೋಗಿಸಲು ನೀಡಲಾಗುತ್ತದೆ.

'ಜಿಲ್ಲೆಯಲ್ಲಿ ಇಲಾಖೆಯಿಂದ 400 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಇಂಧನ ಸಸಿ ನೆಡಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗುಂಡಿ ತೆಗೆಯಲಾಗುತ್ತದೆ. ಸೆಪ್ಟೆಂಬರ್ ವೇಳೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೊಂಗೆ ಸಸಿ ನೆಡಲಾಗುವುದು' ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ರಾಜು ತಿಳಿಸಿದರು.

ಜಿಲ್ಲೆಯ ರೈತರು ಹೆಬ್ಬೇವಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈಗ ಇಲಾಖೆಯಿಂದ ಹೊಂಗೆ ಸಸಿ ನೆಡುವ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕನಿಷ್ಠ ಆರು ತಿಂಗಳ ಅವಧಿಯ ಹೊಂಗೆ ಸಸಿ ನೆಡಲು ನಿರ್ಧರಿಸಲಾಗಿದೆ. ಸಸಿ ನೆಟ್ಟ ನಾಲ್ಕು ವರ್ಷದಲ್ಲಿ ಬೀಜ ದೊರೆ ಯಲಿದೆ. ನಂತರದ ವರ್ಷಗಳಲ್ಲಿ ಇಳುವರಿ ಹೆಚ್ಚಲಿದ್ದು, ರೈತರಿಗೆ ಆದಾಯ ಬರಲಿದೆ ಎಂದರು.

ಸದ್ಯಕ್ಕೆ ಕಸಿ ಮಾಡಿರುವ ಹೊಂಗೆ ಸಸಿ ನೆಡುತ್ತಿಲ್ಲ. ಪಾಳುಬಿದ್ದ ಜಮೀನುಗಳಲ್ಲೂ ಹೊಂಗೆ ಸಸಿ ನೆಡುವ ಗುರಿಯಿದೆ. ಜಿಲ್ಲೆಯಲ್ಲಿರುವ 40 ಸಾವಿರ ಎಕರೆ ಅರಣ್ಯೇತರ ಜಮೀನಿನಲ್ಲೂ ಜೈವಿಕ ಇಂಧನ ಸಸಿ ನೆಡುವ ಉದ್ದೇಶ ಹೊಂದಲಾಗಿದೆ.

ಪ್ರತಿವರ್ಷ ಸುಮಾರು 500 ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆ ವಿಸ್ತರಿಸಲಾಗುವುದು. ರಸ್ತೆ ಬದಿ ಸೇರಿದಂತೆ ರೈತರ ಜಮೀನಿನ ಬದುಗಳಲ್ಲೂ ಸಸಿ ನೆಡುವ ಗುರಿಯಿದೆ. ಮುಂದಿನ ಐದಾರು ವರ್ಷಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸರಕು ಲಭಿಸಲಿದೆ.

ಕಾಮೆಂಟ್‌ಗಳಿಲ್ಲ: