ಮಂಗಳವಾರ, ಸೆಪ್ಟೆಂಬರ್ 28, 2010

ಜೈವಿಕ ಇಂಧನ ಮಂಡಳಿಗೆ 30 ಕೋಟಿ ರೂ.


Udayavani | Aug 10, 2010
ಬೆಂಗಳೂರು : ಜೈವಿಕ ಇಂಧನ ಮಂಡಳಿಗೆ ಶೀಘ್ರವೇ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜರುಗಿದ ಜೈವಿಕ ಇಂಧನ ಕಾರ್ಯಪಡೆಯ ಸಂಸ್ಕರಣಾ ಕೇಂದ್ರಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಅಧ್ಯಕ್ಷತೆ ವಹಿಸಿ, ಮುಖ್ಯಮಂತ್ರಿ ಅವರ ಲಿಖೀತ ಭಾಷಣ ಓದಿದ ಅವರು, ಜೈವಿಕ ಸಸ್ಯಗಳ ಬೀಜಗಳ ಸಂರಕ್ಷಣೆ, ತರಬೇತಿ ಮುಂತಾದ ಉದ್ದೇಶಗಳಿಗಾಗಿ ಶೀಘ್ರವೇ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಜೈವಿಕ ಇಂಧನ ಉದ್ಯಮಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯನ್ನು ಯಶಸ್ಸುಗೊಳಿಸುವ ಉದ್ದೇಶದಿಂದ ಮಂದಿನ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 15 ಕೋಟಿ ಜತ್ರೋಪ, ಹೊಂಗೆ ಇತ್ಯಾದಿ ಸಸಿಗಳನ್ನು ನೆಡುವ ಉದ್ದೇಶವಿದೆ. ಈ ದಿಸೆಯಲ್ಲಿ ಕಾರ್ಯಪಡೆ ಹಮ್ಮಿಕೊಂಡಿರುವ ಕೆಲಸಕ್ಕೆ ಅರಣ್ಯ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಕೈಜೋಡಿಸಬೇಕು ಎಂದು ಕರೆ ನೀಡಿದರು.

ತೈಲ ಉತ್ಪನ್ನಗಳ ಬಳಕೆಯಿಂದ ದೇಶದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದ್ದು ರಾಜ್ಯ ಸರ್ಕಾರ ಜೈವಿಕ ಕಾರ್ಯಪಡೆ ಸ್ಥಾಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದ ಅವರು, ತೈಲೋತ್ಪನ್ನಗಳ ಬಳಕೆಯಿಂದ ರಾಜ್ಯದ ಪರಿಸರದ ಮೇಲೆ ಆಗಿರುವ ಮತ್ತು ಆಗುತ್ತಿರುವ ಪರಿಣಾಮದ ಬಗ್ಗೆ ಕಾರ್ಯಪಡೆ, ಪರಿಸರ ಇಲಾಖೆ ಜತೆ ಸೇರಿ ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕಾರ್ಯಪಡೆ ಅಧ್ಯಕ್ಷ ವೈ .ಬಿ. ರಾಮಕೃಷ್ಣ , ಜೈವಿಕ ಇಂಧನ ಸಂಶೋಧನೆಗೆ ಕಾರ್ಯಪಡೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. 'ಹಸಿರು ಹೊನ್ನು' ಮತ್ತು 'ಬರಡು ಬಂಗಾರ' ಕಾರ್ಯಕ್ರಮಗಳ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ವರ್ಷ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೊಂಗೆ ಇತ್ಯಾದಿ ಸಸಿ ನೆಡಲು ಉದ್ದೇಶಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೈವಿಕ ಇಂಧನ ಕೈಪಿಡಿಯನ್ನು ಸಚಿವರು ಬಿಡುಗಡೆ ನಮಾಡಿದರು.

ಕಾಮೆಂಟ್‌ಗಳಿಲ್ಲ: