ಗುರುವಾರ, ಸೆಪ್ಟೆಂಬರ್ 2, 2010

ಡಾಕ್ಟರ್ ಸಂಜೀವ ಕುಲಕರ್ಣಿಯವರ ‘ಸುಮನ ಸಂಗಮ’

ಡಾಕ್ಟರ್ ಸಂಜೀವ ಕುಲಕರ್ಣಿ ಧಾರವಾಡದಲ್ಲಿ ಪ್ರಸಿದ್ಧ ವೈದ್ಯರು. ಸ್ತ್ರೀ ರೋಗಗಳು ಹಾಗೂ ಪ್ರಸೂತಿ ಅವರ ಶುಶ್ರೂಷೆಯ ಸ್ಪೆಶಲೈಸೇಷನ್. ಸರಳ ಪರಿಸರ ಸ್ನೇಹಿ ಬದುಕು ರೂಢಿಸಿಕೊಂಡ ಅನುಕರಣೀಯ ವೈದ್ಯ ಅವರು.
ಧಾರವಾಡದಿಂದ ಅಳ್ನಾವರ ರಸ್ತೆಯ ಮೇಲೆ ದಡ್ದಿಕಮಲಾಪೂರ ಎಂಬ ಗ್ರಾಮವಿದೆ. ಧಾರವಾಡದಿಂದ ಅಂದಾಜು ೯ ಕಿಲೋ ಮೀಟರ್ ದೂರ. ಅಲ್ಲಿಂದ ೨ ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಡಾಕ್ಟರ್ ಸಂಜೀವಣ್ಣ ಅವರ "ಸುಮನ ಸಂಗಮ". ಅದೊಂದು ಕಾಡು-ನಾಡು ಹಿತಮಿತವಾಗಿ ಮೇಳೈಸಿ ಹದಗೊಂಡ ನಾಡಿನ ಕಾಡು ತೋಟ! ೧೯೯೬ ರಲ್ಲಿ ಡಾಕ್ಟರ್ ಸಂಜೀವ ಕುಲಕರ್ಣಿಯವರು ಈ ೧೭ ಎಕರೆ ಭೂಮಿಯನ್ನು ಕೊಂಡುಕೊಂಡರು.
ಭೂಮಿಯನ್ನು ಕೃಷಿಗಾಗಿ ಆಯ್ದುಕೊಳ್ಳುವಾಗ ಅವರ ಮುಂದೆ ಆಯ್ಕೆಯ ಸ್ಪಷ್ಠವಾದ ಮಾನದಂಡಗಳಿದ್ದವು. ಧಾರವಾಡ ಬಿಟ್ಟು ಹೊಲ ದೂರವಿರಬೇಕು. ನೈಸರ್ಗಿಕವಾಗಿ ಮಳೆ ನೀರಿನಿಂದ ತೋಯ್ದು ಇಂಗುವಂತಹ ಗುಡ್ಡದ 'ಫುಟ್ ಹಿಲ್ಸ್' ನಲ್ಲಿ ಅರಳಬಲ್ಲ, ತುಸು ಇಳಿಜಾರಿರಬೇಕು. ಮಳೆ ನೀರು ಹರಿದು ಹೋಗದೇ ಗುಂಡಿಯಾಕಾರದಲ್ಲಿ ಸಣ್ಣ ಕೆರೆಗಳಂತೆ ಅಲ್ಲಲ್ಲಿ ಸಂಗ್ರಹಿಸಿ ಪುನ: ವ್ಯವಸಾಯಕ್ಕೆ ಅನುಕೂಲವಾಗುವಂತೆ ಮಾಡಲು ಸುಲಭವಾಗಬೇಕು. ಕಾಡಿನ ಪ್ರಾಣಿ-ಪಕ್ಷಿಗಳಿಗೂ ನೈಸರ್ಗಿಕ ಅರವಟ್ಟಿಗೆಗಳಾಗಿ ಅವು ಲಭ್ಯವಾಗಬೇಕು ಎಂದು 'ಸಂಕುಲಜೀವ' ಡಾಕ್ಟರ್ ಸಂಜೀವ ಕುಲಕರ್ಣಿಯವರು ಅಳೆದು-ತೂಗಿ ಈ ಭೂಮಿ ಖರೀದಿಸಿದರು.
ನಾವು ಒಂದು ಒಳ್ಳೆಯ ಕೆಲಸ ಮಾಡಲು ನಿರ್ಧರಿಸಿದರೆ ಇಡೀ ವಿಶ್ವದ ಧನಾತ್ಮಕ ಕಾಯಗಳು ಒಗ್ಗೂಡಿ ನಮ್ಮ ಸಹಾಯಕ್ಕೆ ನಿಂತು, ಪ್ರೇರೇಪಿಸುವಂತೆ.. ಸುದೈವವಶಾತ್ ಡಾಕ್ಟರ್ ಸಂಜೀವ ಕುಲಕರ್ಣಿಯವರು ಖರೀದಿಸಿದ ಹೊಲದ ಮಾಲೀಕ ದಶಕಗಳ ಕಾಲ ಅಲ್ಲಿ ಯಾವುದೇ ಕೃಷಿ ಮಾಡಿರಲಿಲ್ಲ. ಹಾಗಾಗಿ ಅದು ವಿಷ ರಹಿತ ಅನ್ನದ ಬಟ್ಟಲಾಗಿತ್ತು! ಯಾವುದೇ ರಾಸಾಯನಿಕಗಳು, ಕೀಟನಾಶಕಗಳು ಒಟ್ಟಾರೆ ಪರಿಸರ ಅಸ್ನೇಹಿ ಒಳಸುರಿಗಳನ್ನು ಸುರಿದು ಲಾಭಕ್ಕಾಗಿ ಕೃಷಿ ಮಾಡುವುದಿಲ್ಲ ಎಂದು ಅವರು ನಿರ್ಧರಿಸಿದ್ದರು. ಮಸನೊಬು ಫುಕುವೋಕಾ ಹೇಳುವಂತೆ "ವಿಜ್ಞಾನ ತನ್ನ ವೈಜ್ಞಾನಿಕ ಜ್ಞಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೇ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ.."! ಲಭ್ಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೊಢೀಕರಿಸಿಕೊಂಡು ಬಳಸುವುದು, ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಬೆಳೆ ವೈವಿಧ್ಯತೆಯ ಮೂಲಕ ಫಲವತ್ತತೆ ಕಾಯ್ದುಕೊಳ್ಳುವುದು. ನೆಲಮೂಲ ಜ್ಞಾನವನ್ನು ಆಕರಿಸಿಕೊಂಡು ಸಹಜ ಕೃಷಿ ಮಾಡುವುದು ಡಾಕ್ಟರ್ ನಿರ್ಧಾರವಾಗಿತ್ತು.

ಫುಕುವೋಕಾ ಹೇಳುತ್ತಾರೆ ಕೃಷಿಯ ಅಂತಿಮ ಗುರಿ ಬೆಳೆ ಬೆಳೆಯುವುದಲ್ಲ. ಬದಲು ಮನುಷ್ಯನ ಬೆಳವಣಿಗೆ. ನನ್ನ ಕೃಷಿ ಎಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನೂ ಪಡೆದುಕೊಳ್ಳುವುದು." ಡಾಕ್ಟರ್ ಸಂಜೀವ ಕುಲಕರ್ಣಿಯವರು ಕೃಷಿಯನ್ನು ಹಾಗೆ ಅರ್ಥ ಮಾಡಿಕೊಳ್ಳಲು ಅಧ್ಯಯನ ಮಾಡಿದ್ದಾರೆ. 'ಸುಮನ ಸಂಗಮ'ದಲ್ಲಿ ಒಟ್ಟು ಒಂಭತ್ತು ಎಕರೆ ತೋಟಕ್ಕೆ ಹಾಗೂ ಕಾಡಿನ ಮರಗಳಿಗೆ ಮೀಸಲಿಟ್ಟಿದ್ದಾರೆ. ಇನ್ನು ಐದು ಎಕರೆ ಭೂಮಿಯಲ್ಲಿ ಹುರುಳಿ, ರಾಗಿ, ಭತ್ತ, ನೆಲಗಡಲೆ ಹಾಗೂ ಸೋಯಾಬೀನ್ ಬೆಳೆಯುತ್ತಿದ್ದಾರೆ. ಕೆರೆ-ಕೃಷಿ ಹೊಂಡಗಳಿಗಾಗಿ ಎರಡು ಎಕರೆ ಮೀಸಲು. ಈ ಹೊಂಡಗಳೆ ತೋಟದ ಅಂತರ್ಜಲ ಹೆಚ್ಚಿಸುವ ಬ್ಯಾಂಕರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಉಳಿತಾಯ ಖಾತೆಗಳಿಗೆ ಜಮೆ..ಬೇಸಿಗೆಯಲ್ಲಿ ಅವಶ್ಯಕತೆಗೆ ತಕ್ಕಷ್ಟು ಸೇಫ್ ಡೆಪಾಸಿಟ್ ನಿಂದ ಹಿಂಪಡೆದು ಹಿತ-ಮಿತವಾಗಿ ಬಳಕೆ. ಒಟ್ಟು ೧೭ ಎಕರೆಯಲ್ಲಿ ಮಿಕ್ಕಿದ ೧ ಎಕರೆ ಅವರು ತೋಟದಲ್ಲಿ ಸಾಕಿರುವ ಎರಡು ಎತ್ತು, ಎರಡು ಎಮ್ಮೆ, ಎರಡು ಆಕಳುಗಳಿಗೆ ಮೇಯಲು ಹಸಿರು ಹುಲ್ಲು ಒದಗಿಸುತ್ತದೆ.

ಕಳೆದ ನಾಲ್ಕಾರು ವರ್ಷಗಳ ಕೆಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಚಾಟಿ ಬೀಸಿದ್ದ ಬರಗಾಲ ಸಂಜೀವಣ್ಣ ಅವರಿಗೂ ಬಿಸಿ ತಾಗಿಸದೇ ಬಿಟ್ಟಿಲ್ಲ. ತೋಟದ ಯಾವ ಹೊಂಡದಲ್ಲಿಯೂ ಹನಿ ನೀರಿರದೆ, ತಾತ್ವಾರಕ್ಕೆ ಈಡಾಗಿ ಡಾಕ್ಟರ್ ಸಂಜೀವ ಕುಲಕರ್ಣಿಯವರು ತಮ್ಮ ಆಶಯಕ್ಕೆ ವಿರುದ್ಧವಾಗಿ ಕೊಳವೆ ಬಾವಿ ಕೊರೆಸಿದ್ದಿದೆ. ಆದರೆ ನಂತರದ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಡಾಕ್ಟರ್ ಸಂಜೀವ ಕುಲಕರ್ಣಿಯವರು ಬಹಳ ಉಮ್ಮೇದಿಯಿಂದ ಹೇಳುತ್ತಾರೆ.."ನಮ್ಮ ತ್ವಾಟಕ್ಕ ಮೂರು ಕಡೆ ಇಳಿಜಾರು ಅದ. ಯಾವ ಭಾಗದೊಳಗ ಮಳೆಯಾದರೂ ನೀರು ಹರದು 'ಎಪಿ ಸೆಂಟರ್' ಬೋಧಿ ಕೆರೆಯತನಕ ಸಾಗಿ ಬಂದು ಕೃಷಿ ಹೊಂಡ ತುಳುಕುವಂಗ ಮಾಡ್ತದ. ಒಂದು ಹನಿ ನೀರೂ ವ್ಯರ್ಥ ಆಗೋದಿಲ್ಲ. ನಮ್ಮ 'ಸಂಪಿಗೆ ಹೊಂಡ'ದ ಸುತ್ತಳತಿ ೧೦ x ೨೦ x ೪ ಇದ್ದು, ಮಳೆ ಬಂದಾಗ ಮೊದಲ ಅದು ತುಂಬತೈತಿ. ಅದು ತುಂಬಿ ಓವರ್ ಫ್ಲೋ ಆದಮ್ಯಾಲೆ ಕೆಳಗಿನ 'ಮೈನಾ ಹೊಂಡ'ದೊಳಗ ಸಂಗ್ರಹಗೊಳ್ತದ. ಅದರ ಅಳತಿ ಸುಮಾರು ೧೫ x ೫ x ೨. ಮೂರನೇಯ ಹೊಂಡದ ಹೆಸರು 'ರಘು ತೀರ್ಥ; ಅದು ೧೦ x ೧೦ x ೪ ರಷ್ಟು ಜಾಗೆಯೊಳಗ ಹೆಚ್ಚುವರಿಯಾಗಿ ಹರಿದು ಬರೋ ನೀರನ್ನು ತನ್ನ ಒಡಲೊಳಗ ತುಂಬಿಸಿಕೊಳ್ತದ. ನಂತರ ಮತ್ತೊಂದು ಸಣ್ಣ ಕೃಷಿ ಹೊಂಡ ಅದ 'ಕವಳಿ ಕೊಳ'. ಇವೆಲ್ಲ ತುಂಬಿ ತುಳುಕಿದ ಮ್ಯಾಲೆ ನೀರು ಹರಿದುಕೊಂಡು ಬರೋದು 'ಬೋಧಿ ಕೆರೆ'ಗೆ. ಅದು ಭಾಳ ದೊಡ್ದ ಕೆರಿ. ಕೆರೆಯ ಮಧ್ಯದೊಳಗ ಬೋಧಿ ಗಿಡ ಇರೋದರಿಂದ ಅದಕ್ಕ ಆ ಹೆಸರು ಇಟ್ಟೇವಿ" ಡಾಕ್ಟರ್ ಸಂಜೀವ ಕುಲಕರ್ಣಿಯವರ ನೀರ ಕಳಕಳಿ ಅವರು ಸಾಧಿಸಿರುವ ನೀರ ನೆಮ್ಮದಿ ನನಗೆ ವಿಶ್ವ ವಿದ್ಯಾಲಯದ ಪಠ್ಯವಾಗಬಹುದು ಅನ್ನಿಸಿತು.

ಡಾಕ್ಟರ್ ಸಂಜೀವ ಕುಲಕರ್ಣಿಯವರು ಸುಮನ ಸಂಗಮ ತೋಟದ ಸುತ್ತ 'ಜೀವಂತ ಬೇಲಿ' ನೆಟ್ಟಿದ್ದಾರೆ. ಅರ್ಥಾತ್ ವಿದ್ಯುತ್ ಬೇಲಿ ಅಲ್ಲ. ನೈಸರ್ಗಿಕವಾಗಿ ಬೆಳೆದಿದ್ದ ಕಾಡಿನ ಗಿಡಗಳನ್ನು ಕಡಿದು ಸಾಗಿಸದೇ ಹಾಗೆಯೇ ಇಟ್ಟುಕೊಂಡು, ಮತ್ತಷ್ಟು ಕಾಡು ಮರಗಳನ್ನು ಅವರು ನೆಟ್ಟಿದ್ದಾರೆ. ಸಾವಿರಕ್ಕೂ ಮಿಕ್ಕಿದ ಸಾಗವಾನಿ, ಹೊಂಗೆ ಮರಗಳು, ಅಕೇಷಿಯಾ, ಬೇವು, ಆಲ, ಅತ್ತಿ ಬಳಸಲು ಫಲ ಕೊಡುವ ತೆಂಗಿನ ಮರಗಳನ್ನು ಬೆಳೆಸಿ ತೋಟಕ್ಕೆ ಕೋಟೆ ಸದೃಷ ಆವರಣ ಅವರು ಸೃಷ್ಟಿಸಿದ್ದಾರೆ. ನೂರು ಗಿಡಗಳಷ್ಟು ಹಲಸು, ಮಾವು, ಸೀತಾಫ್ಲಲ, ರಾಮ ಫಲ, ಮರಸೇಬು, ಪಪ್ಪಾಯಾ, ಅಂಜೂರು, ಅನಾನಸು, ಸಿಂಗಾಪೂರ ಚೆರ್ರಿ, ಗೇರು ಹಣ್ಣಿನ ಮರ, ವಿವಿಧ ಜಾತಿಯ ನಿಂಬೆಯ ಗಿಡಗಳು ಇಲ್ಲಿವೆ. ಈಗಾಗಲೇ ಅವು ಫಲ ನೀಡಲು ಆರಂಭಿಸಿದ್ದು ಪಕ್ಷಿಗಳು ತಮ್ಮ ಪಾಲನ್ನು ಆಗಲೇ ಹೊತ್ತೊಯ್ದಿದ್ದರೆ, ಡಾಕ್ಟರ್ ಸಂಜೀವ ಕುಲಕರ್ಣಿಯವರು ಆಪ್ತರಿಗೂ ಹಂಚಿ ಖುಷಿ ಪಟ್ಟಿದ್ದಾರೆ.

'ಸುಮನ ಸಂಗಮ'ದಲ್ಲಿ ಪುಷ್ಪೋದ್ಯಾನವೂ ಇದೆ. ಮಲ್ಲಿಗೆ, ಸಂಪಿಗೆ, ಕಾಕಡ, ಗುಲಾಬಿ, ನಾಗಲಿಂಗ ಪುಷ್ಪ, ದೇವಕಣಗಿಲೆ, ಗೌರಿ ಹೂವು, ಅಶೋಕ ಎಲ್ಲವೂ ಮನ ತಣಿಸುತ್ತವೆ. ಕೈ ತುಂಬ ಹಣ ಸಂಪಾದನೆ ಇರುವ, ಮೈತುಂಬ ಟೆನ್ಷನ್ ಹೊತ್ತಿರುವ ಡಾಕ್ಟರ್ ಸಂಜೀವಣ್ಣ ಅವರಿಗೆ ಈ ಕೆಲಸ ಬೇಕಿತ್ತೆ? ಅವರೇ ಹೇಳುತ್ತಾರೆ.."ಕೃಷಿಯಲ್ಲಿ ಗಿಡ ಬೆಳೆಸಿದ ಖುಷಿ, ನೀರು ಇಂಗಿಸಿದ ಹಿತ, ಪಕ್ಷಿ-ಪ್ರಾಣಿಗಳಿಗೆ ಸಾಂದರ್ಭಿಕವಾಗಿ ಆಹಾರವಿತ್ತು ಪೋಷಿಸಿದ ಧನ್ಯತೆ ಇನ್ಯಾವ ವೃತ್ತಿಯಲ್ಲಿ ಇದ್ದೀತೋ?..ಹಾಗಾಗಿ ಹವ್ಯಾಸಕ್ಕಾಗಿ ಈ ಕೆಲಸ; ಆದರೆ ಅಷ್ಟೇ ಗಂಭೀರವಾಗಿ".ನೀವೂ ಒಮ್ಮೆ 'ಸುಮನ ಸಂಗಮ'ಕ್ಕೆ ಭೇಟಿ ನೀಡಿ..

ವಿಳಾಸ: ಡಾ. ಸಂಜೀವ ಕುಲಕರ್ಣಿ, ಬಾಲಬಳಗ ಆವರಣ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ೫೮೦ ೦೦೭. ದೂರವಾಣಿ: (೦೮೩೬) ೨೭೪೩೧೦೦.

ಕಾಮೆಂಟ್‌ಗಳಿಲ್ಲ: