ಶನಿವಾರ, ಸೆಪ್ಟೆಂಬರ್ 18, 2010

ಪರಿಸರ ಸಂರಕ್ಷಣೆಗೆ ನಾವೆಲ್ಲಾ ಪಣ ತೊಡಣ.


ದಶಕೂಪ ಸಮೋವಾಪಿ, ದಶವಾಪೀ ಸಮೋಹ್ರದಃ|
ದಶ ಹ್ರದಸ್ಸಮಃ ಪುತ್ರೋ, ದಶಪುತ್ರಃ ಸಮೋದ್ರುಮಃ||

ಅಂದರೆ, "ಒಂದು ಕೆರೆ ಹತ್ತು ಬಾವಿಗಳಿಗಿಂತ ಉತ್ತಮ, ಒಂದು ಸರೋವರ ಹತ್ತು ಕೆರೆಗಳಿಗಿಂತ ಉತ್ತಮ, ಹತ್ತು ಸರೋವರಗಳಿಗಿಂತ ಒಬ್ಬ ಸುಪುತ್ರನನ್ನು ಪಡೆಯುವುದು ಉತ್ತಮ, ಇದೆಲ್ಲಕ್ಕಿಂತಲೂ, ಒಂದು ವೃಕ್ಷ ವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದುಕ್ಕಿಂತ ಉತ್ತಮ". ಮನುಷ್ಯನ ಬದುಕು ನಿರ್ಬರವಾಗಿರುವುದು ಪ್ರಕೃತಿಯ ಮೇಲೆ. ಪರಿಸರ ತನ್ನೆಲ್ಲಾ ಕೊಡುಗೆಗಳನ್ನು ಕೊಟ್ಟು ನಮ್ಮನ್ನು ಬೆಳೆಸುತ್ತದೆ. ಪರಿಸರ ಎಂದಾಗ ಕೇವಲ ವೃಕ್ಷ ಸಂಪತ್ತು ಮಾತ್ರವಲ್ಲ, ಆದರೆ ಉಳಿದ ಎಲ್ಲಾ ಸಂಪತ್ತಿಗೂ ವೃಕ್ಷ ಸಂಪತ್ತೇ ಆದಾರವಾಗಿರುವುದರಿಂದ ಪರಿಸರವೆಂದಾಕ್ಷಣ ಮರದ ಕಲ್ಪನೆ ಮೂಡುತ್ತದೆ. ನಮ್ಮ ಸಂಸ್ಕೃತಿ ಪರಿಸರಕ್ಕೆ ನೀಡಿದ ಪ್ರಾಧಾನ್ಯತೆಯನ್ನು ಬೇರಾವುದಕ್ಕೂ ನೀಡಿಲ್ಲ.
ಪರಿಸರ ಮನುಷ್ಯನಿಗೆ ತನ್ನೆಲ್ಲಾ ಕೊಡುಗೆಗಳನ್ನು ನೀಡಿದೆ. ಕುಡಿಯಲು ಜಲ, ಬದುಕಲು ನೆಲ, ಉಸಿರಾಡಲು ಶುದ್ಧ ಗಾಳಿ, ಹೀಗೆ ಹತ್ತು ಹಲವು. ಪ್ರಕೃತಿ ವೈಜ್ಞಾನಿಕತೆಗೂ ಮೀರಿ, ಎಲ್ಲವನ್ನೂ ವ್ಯವಸ್ಥಿತವಾಗಿರಿಸಿದೆ. ತನ್ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅಲ್ಲಲ್ಲೇ ಬದುಕಲು ಆಹಾರಾದಿಗಳನ್ನು ಓದಗಿಸಿದೆ. ತನ್ನ ಸಮತೋಲನವನ್ನು ಕಾಪಾಡಲು ಜೀವಚಕ್ರವನ್ನು ನಿರ್ಮಿಸಿದೆ. ತನ್ನ ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಗಂಡು ಹೆಣ್ಣೆಂಬ ಪ್ರತ್ಯೇಕತೆಯನ್ನು ಸೃಷ್ಟಿಸಿದೆ. ವಿಜ್ಞಾನ ತನ್ನ ಶೋಧದಿಂದ ಬಯಲು ಮಾಡಲಾಗದ ಅದೆಷ್ಟೋ ವಿಚಿತ್ರಗಳನ್ನು ತನ್ನೋಳಗೆ ಹುದುಗಿಸಿಕೊಂಡಿದೆ. ನಮ್ಮ ಪೂರ್ವಜರು ಪರಿಸರದೊಂದಿಗೆ ಹೊಂದಿದ್ದ ಅನುಬಂಧವನ್ನು ನಾವಿಂದು ಹೊಂದಿಲ್ಲ. ಮುಂದಿನ ನಮ್ಮ ತಲೆಮಾರು ಪರಸರದ ಕುರಿತಾದ ಅರಿವನ್ನೇ ಹೊಂದಿರುವುದಿಲ್ಲ. ಜನ್ಮ ಕೊಟ್ಟ ತಾಯನ್ನೇ ಮರೆಯುವ ನಾವು ಜೀವನ ಕೊಟ್ಟ ಪರಿಸರವನ್ನು ಮರೆತರೆ ಅಚ್ಚರಿಯೇನು?!
ಮನುಷ್ಯ ಎಂಬ ಶಬ್ದವು ಗುಣವಾಚಕ. ಮನುಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ಮಾನವನಾಗಬಹುದೇ ಹೊರತು, ಮನುಷ್ಯನಾಗಲಾರ. ಯಾವನು ಮನೀಷಿಯೋ ಅವ್ನು ಮಾತ್ರವೇ ಮನುಷ್ಯನಾಗುತ್ತಾನೆ. ಅಂದರೆ, ಯಾವನು ಪ್ರಜ್ನೆಯುಳ್ಳವನೋ, ವಿವೇಕಶಾಲಿಯೋ ಅವನು ಮಾತ್ರವೇ ಮನುಷ್ಯನು. ಆದರೆ ಪ್ರಜ್ಞಾಪೂರ್ಣ, ವಿವೇಕಶಾಲಿ ಮನುಷ್ಯ ತನ್ನ ಅಮಿತವಾದ ಆಸೆಯನ್ನು ಇಡೇರಿಸಿಕೊಳ್ಳುವುದಕ್ಕೆ ಪರಿಸರದ ಮೇಲೆ ಪ್ರಹಾರ ಮಾಡುತ್ತಾನೆ. ಸಹನಾ ಮೂರ್ತಿಯಾದ ಪರಿಸರ ಆವಾಗಲೇ ತನ್ನ ಪ್ರಭಾವವನ್ನು ತೋರಿಸುವುದು. ಚಂಡಮಾರುತ, ಕ್ಷಾಮ, ಸುನಾಮಿಯೇ ಮೊದಲಾದ ಮಾರಣಹೋಮ ನೆಡೆಯುವುದು ಈ ಕಾರಣದಿಂದ. ತನ್ನ ಮೈಗೆ ಕಲ್ಲೆಸೆದವರಿಗೆ ತಿರುಗಿ ಹಣ್ಣನ್ನು ನೀಡುವ ಮರವನ್ನು ಮುಲಾಜಿಲ್ಲದೇ ಕಡಿಯುವವರು ನಾವು. ಯಾವ ಭೂಗರ್ಭದಲ್ಲಿ ಬಂಗಾರ ದೊರೆಯುವುದೋ ಅದೇ ಭೂಗರ್ಭವನ್ನು ಬರಿದಾಗಿಸಹೊರಟವರು ನಾವು. ಛೇ!! ಹೆತ್ತ ತಾಯ ಕರುಳ ಬಾಗೇವ ನೀಚರು ನಾವು…!
ಗೆಳೆಯರೇ, ನಾವು ನಮ್ಮ ಮುಂದಿನ ಪೀಳಿಗೆಯನ್ನು ಕಾಣಬೇಕಾದರೆ, ನಮ್ಮ ಈ ದರಣಿಯನ್ನು ಮುಂದಿನವರಿಗಾಗಿ ಉಳಿಸಲೇಬೇಕಾಗಿದೆ. ಈ ಕುರಿತು ನಾವು ಮಾಡುವ ಕಾರ್ಯದ ಕುರಿತು ಚಿಂತನೆ ಅಗತ್ಯ. ಬರೀ ಮಾತು ಯಾ ಒಂದು ಲೇಖನ ಪ್ರಯೋಜನಕ್ಕೆ ಬಾರದು. ಇದು ಸಾರ್ಥಕವಾಗುವುದು ನಾವು ಈ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯಿಟ್ಟಾಗ. ಆದುದರಿಂದ ಗೆಳೆಯರೇ, ನಾವು ನೀವೆಲ್ಲಾ ಮಾಡಬೇಕಾದದ್ದು ಏನೆಂದರೆ -
  • ನಾವು ವರ್ಷಕ್ಕೆ ಒಂದಾದರೂ ಗಿಡ ನೆಡಬೇಕು.
  • ಸೌಕರ್ಯ ಇಲ್ಲದವರು ಗಿಡ ನೆಡುವವರನ್ನಾದರೂ ಪ್ರೋತ್ಸಾಹಿಸಬೇಕು.
  • ನಮ್ಮ ಮಕ್ಕಳಿಗೆ ಪರಿಸರದ ಮಹತ್ವವನ್ನು ವಿವರಿಸಬೇಕು.
  • ನಮಗೆ ತಿಳಿದಷ್ಟು ಮರ-ಗಿಡ, ಪ್ರಾಣಿ-ಪಕ್ಷಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು.
  • ಒಟ್ಟಾರೆ ನಮ್ಮ ನೆಲ-ಜಲ ಸಂರಕ್ಷಣೆಗೆ ಪಣ ತೊಡಬೇಕು.
ನಿಮ್ಮ ಅಭಿಮತವನ್ನು ತಪ್ಪದೇ ತಿಳಿಸಿ….

ಕಾಮೆಂಟ್‌ಗಳಿಲ್ಲ: